ಅಭಿಪ್ರಾಯ / ಸಲಹೆಗಳು

ಕನಕದಾಸರು ಸಂದರ್ಶಿಸಿದ ಸ್ಥಳಗಳು

ಕನಕದಾಸರು ಸಂದರ್ಶಿಸಿದ ಸ್ಥಳಗಳು

ಸಂತ ಶ್ರೀ ಕನಕದಾಸರ ಜೀವನ

ದಾಸ ಸಾಹಿತ್ಯದಲ್ಲಿಯೇ ವಿಶಿಷ್ಟ ವ್ಯಕ್ತಿತ್ವದವರು ಕನಕದಾಸರು. ಈಗಿನ ಹಾವೇರಿ ಜಿಲ್ಲೆಯ ಬಂಕಾಪುರ ಪ್ರದೇಶಕ್ಕೆ ಕುರುಬ ಜನಾಂಗದ ಬೀರಪ್ಪನೆಂಬಾತನು ಡಣ್ಣಾಯಕನಾಗಿದ್ದ. ಆತನ ಪತ್ನಿ ಬಚ್ಚಮ್ಮ. ಈ ದಂಪತಿಗಳ ಏಕೈಕ ಪುತ್ರ ತಿಮ್ಮಪ್ಪ ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೇ, ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕನಾಯಕನೆಂಬ ಪ್ರಶಂಸೆಗೆ ಪಾತ್ರನಾದ.
ಯುದ್ಧ ಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿರುವಾಗ ಯಾವುದೋ ಚೇತನ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, ಕನಕಾ ಇನ್ನಾದರೂ ನನ್ನ ದಾಸನಾಗೆಂದು ಅಶರೀರವಾಣಿ ಆಯಿತಂತೆ. ಅಂದಿನಿಂದ ಕನಕದಾಸರಾದರು. ಇವರು ರಾಮಾನುಜರು ಮತ್ತು ಮಧ್ವರ ತತ್ವಗಳಿಂದ ಪ್ರಭಾವಿತರಾದರು. ಅದ್ವೈತ ಮತವನ್ನು ಬೋಧಿಸಿ ಜಾತೀಯತೆಯ ವಿರುದ್ಧ ಹೋರಾಡಿ ಮನುಜ ಕುಲಕ್ಕೆ ತತ್ವಸಾರಿದರು.
ಮೋಹನ ತರಂಗಿಣಿ, ನಳಚರಿತ್ರೆ ,ರಾಮಧಾನ್ಯಚರಿತ್ರೆ, ಹರಿಭಕ್ತಸಾರ, ನೃಸಿಂಹಸ್ತವ ಕಾವ್ಯಗಳನ್ನು ಹಾಗೂ ಕೀರ್ತನೆ, ಮುಂಡಿಗೆ, ಉಗಾಭೋಗಗಳನ್ನು ರಚಿಸಿದರು. ಇವರ ಕಾಲಮಾನವನ್ನು 1508-1606 (ಹದಿನಾರನೇ ಶತಮಾನ) ಎಂಬ ಅಭಿಪ್ರಾಯ ಒಮ್ಮತವಾಗಿದೆ.

ಶಂಕ ಹಾಗೂ ಗೋಪಾಳ

ಕನಕದಾಸರು ಉಪಯೋಗಿಸಿದ ಶಂಖ ಮತ್ತು ಗೋಪಾಳ ಇಂದಿಗೂ ಸುರಕ್ಷಿತವಾಗಿವೆ. ಕಾಗಿನೆಲೆಗೆ ಬಂದ ಭಕ್ತಾದಿಗಳು ಇವುಗಳನ್ನು ಕಂಡು ಭಕ್ತಿಯಿಂದ ನಮಸ್ಕರಿಸುವುದಲ್ಲದೆ, ಮೂಕವಿಸ್ಮಿತರಾಗುತ್ತಾರೆ.

 

ಶಂಕ ಹಾಗೂ ಗೋಪಾಳ ಛಾಯಾಚಿತ್ರ

 

 ಸ್ಥಳ: ಲಕ್ಷ್ಮೀನರಸಿಂಹಾದಿಕೇಶವ ದೇವಾಲಯ, ಕಾಗಿನೆಲೆ

 

 

ಬಾಡ

ಸಂತ ಶ್ರೀ ಕನಕದಾಸರು ಜನಿಸಿದ ಬಾಡ ಗ್ರಾಮದಲ್ಲಿ ಈ ಹಿಂದೆ ಭೂಮಿ ಅಗೆಯುವಾಗ ಕನಕದಾಸರ ಆರಾಧ್ಯದೈವ ಶ್ರೀ ಆದಿಕೇಶವ (ಶ್ರೀ ರಂಗನಾಥ) ದೇವಸ್ಥಾನ ಇದ್ದ ಬಗ್ಗೆ ಐತಿಹಾಸಿಕ ಕುರುಹುಗಳು ಲಭ್ಯವಾಗಿವೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಮೇ2008 ರಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಉತ್ಖನನ ಕಾರ್ಯ ಕೈಗೊಂಡಾಗ ಸಂತ ಶ್ರೀ ಕನಕದಾಸರಿಗೆ ಸಂಬಂಧಿಸಿದ ಅರಮನೆಯ ತಳಹದಿಯ ನೀಲ ನಕ್ಷೆ, ಬೆಳ್ಳಿ, ತಾಮ್ರದ ನಾಣ್ಯಗಳು, ಮಡಕೆಯ ಚೂರುಗಳು ಗೋಚರಿಸಿವೆ. ಕರ್ನಾಟಕದಲ್ಲಿ ಉತ್ಖನನಗೊಂಡ ಅನೇಕ ಮಧ್ಯಕಾಲೀನ ಯುಗ ವಾಸದ ಕಟ್ಟಡಗಳಲ್ಲಿಯೇ ಇದು ಅತ್ಯಂತ ವಿಸ್ತಾರವಾದುದೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕನಕದಾಸರ ವಂಶಜರ ಆಡಳಿತವು ಬಂಕಾಪುರ ಕೋಟಿಯಿಂದಲೇ ನಡೆಯುತ್ತಿತ್ತು. ಅಲ್ಲಿ ದೊರೆತ ಸಾಕ್ಷ್ಯಾಧಾರಗಳಿಂದ ಕನಕದಾಸರು ಆ ಭಾಗದ ಡಣ್ಣಾಯಕರ ಮನೆತನದವರಾಗಿದ್ದರೆನ್ನುವುದನ್ನು ಪುರಾವೆಗಳು ಗಟ್ಟಿಗೊಳಿಸಿವೆ.

*ಬಾಡದಲ್ಲಿಯ ಕನಕದಾಸರ ಮೂರ್ತಿ 

 

 

*ಕನಕದಾಸರ ಅರಮನೆಯ ಅವಶೇಷಗಳು

 

 ಬಾಡದಲ್ಲಿಯ ಕನಕದಾಸರ ಮೂರ್ತಿ ಕನಕದಾಸರ ಅರಮನೆಯ ಅವಶೇಷಗಳು

ಸ್ಥಳ: ಬಾಡ, ಶಿಗ್ಗಾಂವಿ ತಾಲೂಕು,ಹಾವೇರಿ ಜಿಲ್ಲೆ.

 

 

ಲಕ್ಷ್ಮೀ ನರಸಿಂಹ ಮೂರ್ತಿ

ಮಣ್ಣಿಂದ ಕೂಡಿದ ಒಂದು ಸಾಧಾರಣ ಗುಡ್ಡವಿತ್ತು. ಆ ಗುಡ್ಡದ ಮೇಲೆ ಒಂದು ಕರಿನೆಲ್ಲಿಕಾಯಿಯ ಮರವಿತ್ತು. ಅಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾರನೋರ್ವನು ನೆಲ್ಲಿಮರದ ನೆರಳಿಗೆ ಕುಳಿತುಕೊಳ್ಳುತ್ತಿದ್ದನು. ಅಲ್ಲಿಂದ ಆತನನ್ನು ಯಾರೋ ಎಳೆದು ಹಾಕಿದಂತಾಗುತ್ತಿತ್ತು. ಇದನ್ನು ಗಮನಿಸಿದ ಕುರಿಗಾರನು ಗುದ್ದಲಿಯಿಂದ ಅಗೆದನು. ಆಗ ಅಲ್ಲಿ ಲಕ್ಷ್ಮೀನರಸಿಂಹ ವಿಗ್ರಹಗಳು ದೊರೆತವು. ಅಲ್ಲಿಯೇ ದೇವಾಲಯ ನಿರ್ಮಾಣ ಮಾಡಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಕರಿನೆಲ್ಲಿಯಿಂದ ಕಾಗಿನೆಲ್ಲಿ ಮುಂದೆ ಕಾಗಿನೆಲೆ ಆಯಿತು. (ಈ ಪರಿಸರದಲ್ಲಿ ಕಾಗೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿವೆ)ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯವಾಗಿದೆ.

ಲಕ್ಷ್ಮೀ ನರಸಿಂಹ ಮೂರ್ತಿ

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು,ಹಾವೇರಿ ಜಿಲ್ಲೆ

 

ಆದಿಕೇಶವ

ಸಂತ ಶ್ರೀ ಕನಕದಾಸರ ಜನ್ಮಸ್ಥಳವಾದ ‘ಬಾಡ’ ಗ್ರಾಮದಲ್ಲಿ ಶ್ರೀರಂಗನಾಥಸ್ವಾಮಿ ಎಂದು ಪೂಜೆ ಮಾಡುತ್ತಿದ್ದರು. ಈಗಲೂ ಬಾಡದಲ್ಲಿ ದೇವಾಲಯದ ಕುರುಹುಗಳು ಗೋಚರಿಸುತ್ತವೆ. ಕನಕನಾಯಕರು ರಂಗನಾಥಸ್ವಾಮಿಯ ಭಕ್ತರಾಗಿದ್ದರು. ಗ್ರಾಮಸ್ಥರು ರಂಗನಾಥನೆಂದು ಕರೆಯುತ್ತಾರೆ. ಆದರೆ ಕನಕದಾಸರು ಬಾಡದಾದಿಕೇಶವನೆಂಬ ಅಂಕಿತನಾಮ ಬಳಸಿದ್ದನ್ನು ಕಾಣುತ್ತೇವೆ. ಸಿರಿ ಸಂಪತ್ತೆಲ್ಲವನ್ನು ತ್ಯಜಿಸಿ ಕನಕದಾಸರಾದ ಮೇಲೆ ಕಂಬಳಿ ಮಟ್ಟಿಯಲ್ಲಿ ತಂದು ಕಾಗಿನೆಲೆಯಲ್ಲಿ ಸ್ಥಾಪಿಸಿದರು. ಅಂದಿನಿಂದ ಕಾಗಿನೆಲೆ ಆದಿಕೇಶವನೆಂದು ಕರೆಯತೊಡಗಿದರು. ಸಂತ ಶ್ರೀ ಕನಕದಾಸರ ಆರಾಧ್ಯದೈವವೇ ಆದಿಕೇಶವನಾಗಿದ್ದರಿಂದ, ಅವರ ಕಾವ್ಯ ಕೀರ್ತನೆಗಳಲ್ಲಿ ‘ಕಾಗಿನೆಲೆ ಆದಿಕೇಶವ’ ಎಂಬ ಅಂಕಿತನಾಮವನ್ನು ಕಾಣುತ್ತೇವೆ.

ಆದಿಕೇಶವ

 
 
ಸ್ಥಳ:ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.
 
 

ಸಂತ ಶ್ರೀ ಕನಕದಾಸರ ಸಮಾಧಿ

ಈಗಿರುವ ಸಂತ ಶ್ರೀಕನಕದಾಸರ ಗದ್ದುಗೆಯ ಸ್ಥಳದಲ್ಲಿ ‘ವೃಂದಾವನ’ (ಕನಕದಾಸರ ಸಮಾಧಿ) ಇತ್ತು. ಊರಿನ ಜನರೆಲ್ಲ ಅದನ್ನು ವಿಶೇಷವಾಗಿ ಭಯ ಭಕ್ತಿಯಿಂದ ಕಾಣುತ್ತಿದ್ದರು. ವೃಂದಾವನವನ್ನು ಅಗೆದು ನೋಡಿದಾಗ ಒಂದು ಅಸ್ತಿಪಂಜರ ದೊರಕಿತು; ಅದು ಕನಕದಾಸರದೆಂದೇ ವಿದ್ವಾಂಸರ ಅಭಿಮತ. ಅಲ್ಲದೇ ಇತಿಹಾಸವನ್ನು ಸಾರುತ್ತಿರುವ ಅರಳಿಮರ ಸಂತ ಶ್ರೀಕನಕದಾಸರ ಸಮಕಾಲೀನದೆಂದು ಹಿರಿಯರು ಹೇಳುತ್ತಾರೆ. ಬೆಂಗಳೂರಿನ ಕಾಳಿದಾಸ ಗೆಳೆಯರ ಬಳಗದವರು (1982 ರಲ್ಲಿ), ಕನಕಮಂದಿರವನ್ನು ನಿರ್ಮಾಣ ಮಾಡಿದರು. ನಂಜನಗೂಡಿನಿಂದ ಕನಕದಾಸರ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದರು. ಕನ್ನಡ ವರನಟ ಡಾ. ರಾಜಕುಮಾರ್ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗ ಕಾಗಿನೆಲೆ ಅಭಿವೃದ್ಧಿಪ್ರಾಧಿಕಾರವು ಭವ್ಯವಾದ ಕನಕಮಂದಿರವನ್ನು ನಿರ್ಮಿಸಲು ಆರಂಭಿಸಿದೆ.

 

 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು,ಹಾವೇರಿ ಜಿಲ್ಲೆ .

ಲಕ್ಷ್ಮೀ ನರಸಿಂಹಾದಿಕೇಶವ ದೇವಾಲಯ

ಕಾಗಿನೆಲೆಯಲ್ಲಿ ಭವ್ಯವಾದ ಮಹಾದ್ವಾರ ಹಾಗೂ ಗೋಪುರವನ್ನು ಹೊಂದಿದ ದೇವಾಲಯವಿದೆ. ಈ ದೇವಾಲಯದಲ್ಲಿ ಲಕ್ಷ್ಮೀ ಮತ್ತು ನರಸಿಂಹ ಮೂರ್ತಿಗಳಿವೆ. ಪಕ್ಕದಲ್ಲಿಯೇ ಮತ್ತೊಂದು ದೇವಾಲಯವಿದೆ. ಅಲ್ಲಿ ಆದಿಕೇಶವ ಮೂರ್ತಿ ಇದೆ. ಬಾಡದಿಂದ ಮೂರ್ತಿಯನ್ನು ತಂದು ಸಂತ ಶ್ರೀ ಕನಕದಾಸರೇ ಆದಿಕೇಶವಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಕನಕದಾಸರಿಂದಲೇ ಜೀರ್ಣೋದ್ಧಾರಗೊಂಡ ದೇವಾಲಯಗಳು ಸುಸ್ಥಿತಿಯಲ್ಲಿವೆ. ಈ ಹಿಂದೆ ಒಂದು ಬೇವಿನ ಮರ, ಆ ಮರದ ಕೆಳಗೆ ಒಂದು ಕಟ್ಟೆ ಇತ್ತು. ಅದನ್ನು ಕನಕದಾಸರ ಪ್ರವಚನ ಕಟ್ಟೆ ಎಂದು ಕರೆಯುತ್ತಿದ್ದರು. ಕಾಲಾಂತರದಲ್ಲಿ ಅದನ್ನು ತೆಗೆಯಲಾಯಿತೆಂದು ಹಿರಿಯರು ಹೇಳುತ್ತಾರೆ. ಈ ದೇವಾಲಯಗಳ ಪ್ರಾಂಗಣದಲ್ಲಿಯೇ ಹನುಮಾನ, ಗಣಪತಿ ಹಾಗೂ ನವಗ್ರಹ ಮೂರ್ತಿಗಳ ದರ್ಶನದ ಭಾಗ್ಯ ಲಭಿಸುತ್ತದೆ.

 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು , ಹಾವೇರಿ ಜಿಲ್ಲೆ.

ಆದಿಕೇಶವ ಉತ್ಸವ ಮೂರ್ತಿ

ಈ ಮೂರ್ತಿಯನ್ನು ಸಂತ ಶ್ರೀ ಕನಕದಾಸರಿದ್ದಾಗಲೆ ತಯಾರಿಸಲಾಗಿದೆ . ಪಂಚಲೋಹದಿಂದ ತಯಾರಿಸಿದ ಉತ್ಸವಮೂರ್ತಿ ಬಹು ಆಕರ್ಷಣೀಯವಾಗಿತ್ತು. ವಿಜಯದಶಮಿ ಹಾಗೂ ಇತರ ವಿಶೇಷ ದಿನಗಳಲ್ಲಿ ಈ ಮೂರ್ತಿಯನ್ನೇ ಪಲ್ಲಕ್ಕಿಯಲ್ಲಿಟ್ಟು ಉತ್ಸವ ಕೈಗೊಳ್ಳಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ಮೂರ್ತಿಯು ಹಗಲು ದರೋಡೆಕೋರರಿಂದ ಕಳವಾಯಿತೆಂದು ದೇವಾಲಯಕ್ಕೆ ಸಂಬಂಧಿಸಿದವರು ಹೇಳುತ್ತಾರೆ. ಈಗ ಮತ್ತೊಂದು ಮೂರ್ತಿಯನ್ನು ಮಾಡಲಾಗಿದೆ.

 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ರಂಗ ಮಂಟಪ

ಕಾಗಿನೆಲೆಯ ಲಕ್ಷ್ಮೀನರಸಿಂಹಾದಿಕೇಶವ ಎರಡೂ ದೇವಾಲಯಗಳ ಮಧ್ಯೆ ರಂಗಮಂಟಪವಿದೆ. ವಿಜಯ ದಶಮಿಯಂದು ಹಾಗೂ ಹಬ್ಬ ಹರಿದಿನಗಳಲ್ಲಿ ವಿಶೇಷ ಮೆರಗನ್ನು ಪಡೆಯುತ್ತದೆ. ಉತ್ಸವ ಮೂರ್ತಿ ಉತ್ಸವ ಕಾರ್ಯಕ್ರಮ ಮುಗಿಸಿಕೊಂಡು, ದೇವಾಲಯ ಪ್ರವೇಶಿಸುವ ಮುನ್ನ ಕೆಲ ಹೊತ್ತು ಈ ರಂಗಮಂಟಪದಲ್ಲಿ ಮಿಶ್ರಮಿಸುತ್ತದೆ. ಆಗ ಎಲ್ಲಾ ಭಕ್ತಾದಿಗಳು ದರ್ಶನ ಪಡೆದುಕೊಳ್ಳುತ್ತಾರೆ. ಪುರಾತನವಾದ ಈ ರಂಗಮಂಟಪ ತನ್ನದೇ ಆದ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ.

 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ .

ಚೆನ್ನಕೇಶವ

ಬಂಕಾಪುರ ಹತ್ತಿರವಿರುವ ಗುಡ್ಡದ ಚನ್ನಾಪುರದಿಂದ, ಈ ಮೂರ್ತಿಯನ್ನು ಕನಕದಾಸರು ತಂದು, ಕಾಗಿನೆಲೆಯಿಂದ 2 ಕಿ.ಮೀ. ಅಂತರವಿರುವ ಇಂಗಳಗೊಂದಿಯಲ್ಲಿ ಪ್ರತಿಷ್ಠಾಪಿಸಿದರು. ಗುಡ್ಡದ ಚನ್ನಾಪುರದಲ್ಲಿ ಇಂದಿಗೂ ಭವ್ಯ ದೇವಾಲಯದ ಅವಶೇಷಗಳನ್ನು ಕಾಣಬಹುದು. ಬೇಲೂರು ಚನ್ನಕೇಶವನನ್ನು ಸಂತ ಶ್ರೀಕನಕದಾಸರು ಈ ಚೆನ್ನಕೇಶವನಲ್ಲಿ ಕಂಡು ಸ್ತುತಿಸಿದ್ದಾರೆ. ಪ್ರಾಧಿಕಾರವು ಈ ಸ್ಥಳದಲ್ಲಿ ಭವ್ಯ ದೇವಾಲಯವನ್ನು ನಿರ್ಮಿಸುತ್ತಿದೆ.

 

 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ತಿಮ್ಮಕೇಶವ

ಕಾಗಿನೆಲೆಯಿಂದ 4 ಕಿ.ಮೀ. ಅಂತರದಲ್ಲಿರುವ ಕಮ್ಮೂರಿನ ಗುಡ್ಡದ ಮೇಲೆ ಈ ದೇವಾಲಯವಿದೆ. ಇದು ಉದ್ಭವ ಮೂರ್ತಿಯಾಗಿದೆ. ಇದನ್ನೂ ಕನಕದಾಸರೆ ಸ್ಥಾಪಿಸಿ ತಿರುಪತಿ ತಿಮ್ಮಪ್ಪನನ್ನು ಇಲ್ಲಿ ಕಂಡು ಸ್ತುತಿಸಿದ್ದಾರೆ. ತಿಮ್ಮಕೇಶವ, ಚೆನ್ನಕೇಶವ, ಆದಿಕೇಶವರು ಅಣ್ಣ ತಮ್ಮಂದಿರೆಂದು ಸ್ಥಳೀಯರು ಹೇಳುತ್ತಾರೆ. ಕಮ್ಮೂರಿನಲ್ಲಿ ಕನಕದಾಸರ ಹೂದೋಟ, ಅವರು ಕುಳಿತುಕೊಳ್ಳುತ್ತಿದ್ದ ಕಟ್ಟೆ ಹಾಗೂ ಅವರೇ ನಿರ್ಮಿಸಿದ ಕನಕನಾಯಕನ ಕಾಲುವೆ ಇವೆ.

 

ಸ್ಥಳ: ಕಮ್ಮೂರು, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ .

ದಾಸನಕೊಪ್ಪದ ಸೌಂದರ್ಯ

ಮಹಾತ್ಮ ಕನಕದಾಸರ ಮಹಿಮೆಯನ್ನು ಕೇಳಿದ್ದ ಆನೆಗೊಂದಿ ಅರಸನು, ಕನಕದಾಸರನ್ನು ಪರೀಕ್ಷಿಸಲು ಕಾಗಿನೆಲೆಗೆ ಬಂದನು. ಸಂತ ಶ್ರೀ ಕನಕದಾಸರ ಭಕ್ತಿ ವಿಶಿಷ್ಟತೆಯನ್ನು ಕಂಡು, ನೀವು ಎಲ್ಲಿಯವರೆಗೆ ಒಂದೇ ಉಸುರಿನಿಂದ ಶಂಕ ಊದುತ್ತಿರೋ ಅಲ್ಲಿಯವರೆಗೆ ಭೂಮಿಯನ್ನು ಉಂಬಳಿಯಾಗಿ ಕೊಡುತ್ತೆನೆಂದನು. ಅದರಂತೆ ಕನಕದಾಸರು ಶಂಖವನ್ನು ಊದಿದರು. ಸುಮಾರು 400 ಎಕರೆ ಭೂಮಿಯನ್ನು ಅರಸನು ಕನಕದಾಸರಿಗೆ ಕೊಟ್ಟನು. ಬಂದ ಆದಾಯದಲ್ಲಿ ಲಕ್ಷ್ಮೀನರಸಿಂಹಾದಿಕೇಶವ ದೇವಾಲಯದ ಉತ್ಸವ ಇತ್ಯಾದಿಗಳು ನಡೆಯುವಂತೆ ಸ್ವಲ್ಪ ಆದಾಯವನ್ನು ಸಲ್ಲಿಸಿರೆಂದು ಹೇಳಿ, ಕನಕದಾಸರು ಬೇರೆಯವರಿಗೆ ವಹಿಸಿಕೊಟ್ಟರು. ಅದು ಕನಕದಾಸರಿಗೆ ಸಂಬಂಧಿಸಿದ ಊರಾದ್ದರಿಂದ ಅದಕ್ಕೆ ದಾಸನಕೊಪ್ಪವೆಂದು ಕರೆಯುತ್ತಾರೆ. ಉಳುವವನೆ ಒಡೆಯ ಕಾಯ್ದೆಯಿಂದ ಆ ಭೂಮಿ ಉಳುವವರ ಸ್ವತ್ತಾಗಿದೆ. ವಿಜಯದಶಮಿ ಆದಿಕೇಶವ ಉತ್ಸವದಲ್ಲಿ ಈ ಊರಿನವರದೆ ಬಹುಮುಖ್ಯ ಪಾತ್ರವಾಗಿದೆ.

ಸ್ಥಳ: ದಾಸನಕೊಪ್ಪ,ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ .

ಹೂದೋಟದ ತಿಮ್ಮಪ್ಪ

ಈ ದೇವಾಲಯವು ‘ಕದರಮಂಡಲಗಿ’ ಊರಿನ ಹೊರಗೆ ಇದೆ. ಕನಕದಾಸರಿಗೆ ವಯಸ್ಸಾಗಿ ಪಾದಯಾತ್ರೆಗೆ ತೊಂದರೆಯಾಯಿತು. ಆದರೂ ತಿರುಪತಿ ತಿಮ್ಮಪ್ಪನ ದರುಶನದ ಹಂಬಲ ಮಾಸಿರಲಿಲ್ಲ ; ಯಾವಾಗಲೂ ಆತನ ಧ್ಯಾನದಲ್ಲಿಯೇ ದಿನಗಳೆಯುತ್ತಿದ್ದರು. ತಿರುಪತಿ ತಿಮ್ಮಪ್ಪನು ಕನಕದಾಸರ ಕನಸ್ಸಿನಲ್ಲಿ ಕಾಣಿಸಿಕೊಂಡು, ‘ವಯಸ್ಸಾಯಿತೆಂದು ಕಳವಳಿಸದಿರು ಕನಕಾ, ಹೂದೋಟದ ತಿಮ್ಮಪ್ಪನ ದರುಶನ ಪಡೆದುಕೋ. ನಿನಗೆ ಅಲ್ಲೇ ದರುಶನ ಕೊಡುತ್ತೇನೆ’ಎಂದನು. ಅಂದಿನಿಂದ ಸಂತ ಶ್ರೀ ಕನಕದಾಸರು ನಿತ್ಯ ಪೂಜೆಗೈದು ಹೂದೋಟದ ತಿಮ್ಮಪ್ಪನಲ್ಲಿ, ತಿರುಪತಿ ತಿಮ್ಮಪ್ಪನನ್ನು ಕಂಡರು. ಈ ದೇವಾಲಯದ ಪಕ್ಕಕ್ಕೆ ಒಂದು ಬಾವಿ ಇದೆ. ಅಲ್ಲಿ ಕನಕದಾಸರು ಸ್ನಾನಮಾಡುತ್ತಿದ್ದರೆಂಬ ಪ್ರತೀತಿ ಇದೆ.

 
 

ಸ್ಧಳ ; ಕದರಮಂಡಲಗಿ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ .

ಕನಕರಾಯನ ಕಟ್ಟೆ

ಹಳ್ಳೂರ ಗ್ರಾಮವು ಪುರಾತನ ಇತಿಹಾಸವನ್ನು ಹೊಂದಿದೆ. ಅಲ್ಲಿ ತುಂಗಭದ್ರಾ ನದಿ ಹರಿದಿದೆ. ಪಕ್ಕಕ್ಕೆ ಒಂದು ಬೆಟ್ಟವಿದೆ. ಆ ಬೆಟ್ಟದ ಮೇಲೆ ಉದ್ಭವ ರಂಗನಾಥಸ್ವಾಮಿಯ ಮೂರ್ತಿ ಹಾಗೂ ಪ್ರಾಚೀನ ದೇವಾಲಯವಿದೆ. ಸಂತ ಶ್ರೀ ಕನಕದಾಸರು ರಂಗನಾಥಸ್ವಾಮಿಯ ದರ್ಶನಕ್ಕೆ ಹೋಗುತ್ತಿದ್ದರು. ತುಂಗಾಭದ್ರಾನದಿಯಲ್ಲಿ ಸ್ನಾನಮಾಡಿ, ತಮ್ಮ ಉದರದೊಳಗಿನ ಕರುಳುಗಳನ್ನೆಲ್ಲಾ, ಹೊರಗೆ ತೆಗೆದು ಕೊಂಡು ಬಂದು ಕಲ್ಲಿನ ಮೇಲೆ ಹರವುತ್ತಿದ್ದರು(ಇದೇ ರೀತಿಯ ಐತಿಹ್ಯ ಮಂಡ್ಯ ಜಿಲ್ಲೆ ಮಹಾದೇವಪುರದಲ್ಲೂ ಇದೆ) ಧರೆ ಬಿಸಿಲಿನಲ್ಲಿ ಒಣಗಿದ ನಂತರ ಮತ್ತೆ ಉದರದಲ್ಲಿ ಹಾಕಿಕೊಂಡು, ಬೆಟ್ಟವನ್ನೇರುತ್ತಿದ್ದರು. ದಾರಿಯ ಮಧ್ಯೆ ಕುಳಿತುಕೊಳ್ಳುತ್ತಿದ್ದರು. ಅಲ್ಲಿ ಈಗ ಕಲ್ಲಿನ ರಾಶಿ ಇದೆ. ಅದಕ್ಕೆ ಸಂತ ಶ್ರೀ ಕನಕದಾಸರ, ಕನಕರಾಯನಕಟ್ಟೆ ಎಂದು ಕರೆಯುತ್ತಾರೆ. ಈಗಲೂ ಭಕ್ತಾದಿಗಳು ಬೆಟ್ಟವನ್ನೇರುವಾಗ ಆ ಕನಕರಾಯನ ಕಟ್ಟೆಗೆ ಲಕ್ಷ್ಮೀರಮಣ ಗೋವಿಂದ ಗೋವಿಂದ ಎಂದು, ಒಂದು ಕಲ್ಲನ್ನು ಎಸೆದರೆ(ಹಾಕಿದರೆ ) ಬೆಟ್ಟವನ್ನೇರಿದ ಆಯಾಸವೆಲ್ಲ ಮಾಯವಾಗುತ್ತದೆಂದು ನಂಬಿಕೆ ಇದೆ. ಈ ಪರಂಪರೆ ಹರಿದು ಬಂದಿದೆ.

ಸ್ಥಳ: ಹಳ್ಳೂರು, ಹಿರೇಕೇರೂರ ತಾಲೂಕು, ಹಾವೇರಿ ಜಿಲ್ಲೆ .

ಕನಕದಾಸರ ಗುಹೆ

ಚಾಮರಾಜನಗರ ಜಿಲ್ಲೆಯ, ಬಿಳಿಗಿರಿರಂಗನ ಬೆಟ್ಟದಲ್ಲಿ ಒಂದು ಗುಹೆ ಇದೆ. ಅದಕ್ಕೆ ಶ್ರೀ ಸಂತ ಕನಕದಾಸರ ಗುಹೆ ಎಂದು ಕರೆಯುತ್ತಾರೆ. ತೇರು ಬೀದಿಯಿಂದ, ಮೊದಲಿನ ಕಾಲು ದಾರಿ ಹಿಡಿದು ಸುಮಾರು 2 ಕಿ.ಮೀ ಗೂ ಮಿಕ್ಕಿ ಕಾಡಿನ ಒಳಹೋದರೆ ಈ ಗುಹೆ ಸಿಗುತ್ತದೆ. ಒಂದು ದೈತ್ಯಗಾತ್ರದ ಬಂಡೆಯಿದೆ. ಅದರ ಕೆಳಭಾಗದಲ್ಲಿ ಗುಹೆ ಇದೆ. ಆ ಗುಹೆಯಲ್ಲಿ ಸಂತ ಶ್ರೀ ಕನಕದಾಸರು ಶ್ರೀ ರಂಗನಾಥಸ್ವಾಮಿಯ ಧ್ಯಾನ, ತಪಸ್ಸಿನಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲಿ ಈಗಲೂ ಅಭಯಾರಣ್ಯವಿದೆ. ಹುಲಿ, ಚಿರತೆ,ಕರಡಿ,ಆನೆಗಳ ಭಯವಿದೆ. ಈ ಅರಣ್ಯ ಪುರಾಣಗಳಲ್ಲಿ ಚಂಪಕಾರಣ್ಯವೆಂದು ವರ್ಣಿತವಾಗಿದೆ.

ಸ್ಥಳ: ಬಿಳಿಗಿರಿರಂಗನ ಬೆಟ್ಟ, ಯಳಂದೂರು ತಾಲೂಕು, ಚಾಮರಾಜನಗರ ಜಿಲ್ಲೆ .

ಸಂತ ಶ್ರೀ ಕನಕದಾಸರ ಬಂಡೆ

ಮಂಡ್ಯ ಜಿಲ್ಲೆ, ಶ್ರೀ ರಂಗಪಟ್ಟಣ ತಾಲೂಕಿನ, ಮಹಾದೇವಪುರ ಪುರಾತನ ಹಳ್ಳಿ. ಅಲ್ಲಿ ಕಾವೇರಿ ನದಿ ಹರಿದಿದೆ. ಕನಕದಾಸರು ತಿರುಪತಿಯ ಯಾತ್ರೆಗೆ ಹೊರಟಾಗಲೆ, ಅಲ್ಲಿ ನದಿದಾಟುವ ಅವಶ್ಯಕತೆ ಇತ್ತು. ಅಲ್ಲಿಯೇ ಇದ್ದ ದೋಣಿಯಲ್ಲಿ ಕುಳಿತರು. ಅವರ ಮೈಯೆಲ್ಲಾ ಕಜ್ಜಿ(ಗಾಯ)ಗಳಾಗಿದ್ದರಿಂದ ದೋಣಿಯಿಂದ ಹೀಯಾಳಿಸಿ ಅಂಬಿಗರು ಇಳಿಸಿದರು. ನೊಂದ ಕನಕದಾಸರು ‘ಸಾವಿರ ಗಳಿಸಿದರೂ ಸಂಜೆಗೆ ಲಯವಾಗಲಿ ನಳ್ಳಿ ಗುಳ್ಳಿಯಂತೆ ಮಕ್ಕಳಾಗಲಿ’ ಎಂದು ಶಾಪವಿತ್ತರು. ಪಕ್ಕದ ತೋಟದಲ್ಲಿ ಒಂದು ಬಾಳೆಎಲೆಯನ್ನು ಕೇಳಿದರು. ಆ ತೋಟದ ಒಡೆಯ ಅವರನ್ನು ಬೈದು ಹೊರದೂಡಿದ. ಇಲ್ಲಿ ಬಾಳೆ ಬೆಳೆದರು ಫಲಕೊಡದೇ ಇರಲೆಂದು ಶಾಪವಿತ್ತರು. ಈಗಲೂ ಬಾಳೆ ಅಲ್ಲಿ ಫಲ ಕೊಡುವುದಿಲ್ಲ ಎಂಬುದು ಜನರ ನಂಬಿಕೆ. ಈಗ ಅದು ಪಾಳು ಬಿದ್ದಿದೆ.
ಪಕ್ಕದ ತೋಟದಲ್ಲಿ ಬಾಳೆ ಎಲೆ ಪಡೆದು, ಅದರ ಮೇಲೆ ಕುಳಿತು ನದಿ ದಾಟಿದರು. ಇದನ್ನು ನೋಡಿದ ಅಲ್ಲಿಯ ಅಂಬಿಗರು ನೀವು ಸಾಮಾನ್ಯರಲ್ಲ, ಮಹಾಪುರುಷರು ನಮ್ಮ ದೋಣಿಗೆ ಶಾಪ ಕೊಡದಿರಿ ಎಂದು ಮೊರೆ ಹೋದರು. ನನ್ನ ಹೆಸರಿನಿಂದ ವರ್ಷದಲ್ಲಿ ನಾಲ್ಕು ಜನರಿಗಾದರೂ ಊಟ ಹಾಕಿರಿ, ಇಲ್ಲಿ ಯಾವುದೇ ರೀತಿ ದೋಣಿ ಅಪಘಾತ ಸಂಭವಿಸುವುದಿಲ್ಲವೆಂದು ಶುಭಹಾರೈಸಿ ಪ್ರಯಾಣ ಬೆಳೆಸಿದರು. ಅಲ್ಲಿ ಇಂದಿಗೂ ಯಾವುದೇ ತೆರನಾಗಿ ದೋಣಿ ಅಪಘಾತವಾಗಿಲ್ಲ. ನದಿಯ ಮಧ್ಯದಲ್ಲಿ ಒಂದು ಬಂಡೆ ಇದೆ. ಮಂಡಿಯೂರಿ ಕುಳಿತ ಕಾಲಿನ ಹಾಗೂ ಕೈ ಗುರುತು ಮೂಡಿವೆ. ಅವೇ ಸಂತ ಶ್ರೀ ಕನಕದಾಸರ ಗುರುತು. ಅದರ ಮೇಲೆ ಯಾರೂ ಹತ್ತುವುದಿಲ್ಲ. ಒಂದು ವೇಳೆ ಹತ್ತಿದರೆ ಬದುಕುವುದಿಲ್ಲ. ಹೀಗೆ ವಿಶಿಷ್ಟ ಹಿನ್ನೆಲೆ ಇಂದಿಗೂ ಅಲ್ಲಿದೆ. ಸಂತ ಶ್ರೀ ಕನಕದಾಸರ ಹಬ್ಬವೆಂದು ಅಲ್ಲಿಯ ಅಂಬಿಗ ಜನಾಂಗದವರು ಮಾಡುತ್ತಾರೆ.

ಸ್ಥಳ: ಮಹದೇವಪುರ, ಶ್ರೀರಂಗಪಟ್ಟಣ ತಾಲೂಕು, ಮಂಡ್ಯ ಜಿಲ್ಲೆ .

ಕನಕಸರೋವರ (ಕೆರೆ)

ಕಾಗಿನೆಲೆ ಹಾಗೂ ಸುತ್ತಹಳ್ಳಿಗಳಿಗೆ ಜೀವನಾಡಿಯಾಗಿದೆ. ಶಾಸನಗಳಲ್ಲಿ ಪೆರ್ಗೆರೆ ಎಂದು ಉಲ್ಲೇಖವಾಗಿದೆ. ಸುಮಾರು 2 ಕಿ.ಮೀ ಉದ್ದವಿದೆ. ಇದು ಆಂಗ್ಲಭಾಷೆಯ ಟಿ ಆಕಾರದಲ್ಲಿದೆ. ಅನೇಕ ಕೃಷಿಕರೂ ಕೂಡ ಈ ಕೆರೆಯನ್ನೇ ಅವಲಂಬಿಸಿದ್ದಾರೆ. ಈ ಕೆರೆಯ ಪಕ್ಕದಲ್ಲಿಯೇ ಸಂತ ಶ್ರೀಕನಕದಾಸರು ಐಕ್ಯವಾದ ಗದ್ದುಗೆ ಇರುವುದರಿಂದ ಕೆಲವರು ಇದನ್ನು ‘ಕನಕಸರೋವರ’ ಎಂದು ಕರೆಯುತ್ತಾರೆ.

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ಕನಕ ಕೇಶವ ತೇರು

ಸಂತ ಶ್ರೀಕನಕದಾಸರ ಗದ್ದುಗೆಯಿಂದ ಈ ತೇರನ್ನು ಎಳೆಯುತ್ತಾರೆ. ಕನಕಗುರು ಪೀಠದ ನೇತೃತ್ವದಲ್ಲಿ ನಡೆಯುವ ‘ಕನಕ ಜಯಂತಿ’ ಯಂದು ಅತೀ ವಿಜೃಂಭಣೆಯಿಂದ ಈ ಕಾರ್ಯಕ್ರಮ ಜರಗುತ್ತದೆ. ಇದಕ್ಕೆ ಕನಕ-ಕೇಶವ ತೇರು ಎಂದು ಕರೆಯುತ್ತಾರೆ.

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ಕನಕ ಗುರುಪೀಠ ಹಾಗೂ ಶ್ರೀಗುರು ರೇವಣಸಿದ್ದೇಶ್ವರ ಕುಟೀರ

ಕನಕಗುರು ಪೀಠವು 1992 ರಲ್ಲಿ ಸ್ಥಾಪನೆಯಾಯಿತು. ಪ್ರಥಮ ಜಗದ್ಗುರುಗಳಾಗಿ ಶ್ರೀ ಶ್ರೀ ಶ್ರೀ ಬೀರೇಂದ್ರಕೇಶವ ತಾರಕಾನಂದ ಪುರಿ ಮಹಾಸ್ವಾಮಿಗಳು ಸಿಂಹಾಸನವನ್ನೇರಿದರು. ಅಂದಿನಿಂದ ಕನಕಗುರು ಪೀಠವು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ದ್ವಿತೀಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಕುಟೀರವನ್ನು 2008 ರಲ್ಲಿ ನಿರ್ಮಾಣ ಮಾಡಲಾಯಿತು. ಶ್ರೀ ಕನಕಗುರು ಪೀಠವು ದೀನ ದಲಿತರಿಗೆ ಆಶ್ರಯತಾಣವಾಗಿದೆ.

 
 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ಬಡವರ ಕಾಶಿ

ಕರ್ನಾಟಕದಲ್ಲಿ ಸಾಮಾನ್ಯವಾಗಿ ಹನುಮಪ್ಪನಿಲ್ಲದ ಊರು ಸಿಗುವುದಿಲ್ಲ. ಆದರೂ ಕದರಮಂಡಲಗಿ ‘ಶ್ರೀ ಕಾಂತೇಶ’, ಸಾತೇನಹಳ್ಳಿ ‘ಶ್ರೀ ಶಾಂತೇಶ’, ಶಿಕಾರಿಪುರದ ‘ಶ್ರೀ ಬ್ರಾಂತೇಶ’-ಹೀಗೆ ಮೂವರು ಮುಖ್ಯ ಪ್ರಾಣರು ಜಾಗೃತಮಾನ್ಯರಾಗಿ ನಂಬಿದವರಿಗೆ ಇಂಬಿಟ್ಟು ಪೊರೆಯುತ್ತಿದ್ದಾರೆ. ಈ ಮೂವರ ದರ್ಶನ ಮಾಡಿಕೊಂಡು ಕಾಗಿನೆಲೆಯ ಆದಿಕೇಶವನ ದರ್ಶನ ಪಡೆದರೆ ಕಾಶಿಯಲ್ಲಿ ದೊರೆಯುವ ಪುಣ್ಯ ಸಿಗುತ್ತದೆ. ಎಂದು ಅಲ್ಲಿನ ಜನರು ಪರಾಂಪರಾನುಗತದಿಂದ ನಂಬಿಕೊಂಡು ಬಂದಿದ್ದಾರೆ. ಆದರೆ ಬಡವರಿಗೆ ಪ್ರಯಾಣ ಮಾಡುವುದು ಕಷ್ಟಸಾಧ್ಯವೆಂದರಿತ ಕನಕದಾಸರು ಕಾಗಿನೆಲೆ ಆದಿಕೇಶವನ ಸನ್ನಿಧಿಯಲ್ಲೇ ಮೂವರು ಪ್ರಾಣದೇವರನ್ನು ಸ್ಥಾಪಿಸಿದ್ದಾರೆ. ಪ್ರತಿ ಶ್ರಾವಣ, ಕಾರ್ತಿಕ, ಅಧಿಕಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಕಾಗಿನೆಲೆ ಒಂದರ್ಥದಲ್ಲಿ ಬಡವರ ಕಾಶಿಯಾಗಿದೆ.

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.


ಕಾಗಿನೆಲೆ ಕ್ಷೇತ್ರದ ಶ್ರೀ ಲಕ್ಷ್ಮೀನರಸಿಂಹಾದಿಕೇಶವ ತೇರು ಹಾಗೂ ರಾಜಗೋಪುರ

ಕಾಗಿನೆಲೆ ಕ್ಷೇತ್ರದ ಶ್ರೀ ಲಕ್ಷ್ಮೀನರಸಿಂಹಾದಿಕೇಶವ ತೇರು ಹಾಗೂ ರಾಜಗೋಪುರ
ಈ ತೇರು ಕನಕದಾಸರ ಕಾಲದ್ದೆಂದು ಹಿರಿಯರ ಹಾಗೂ ವಿದ್ವಾಂಸರ ಅಭಿಪ್ರಾಯವಾಗಿದೆ. ಐದು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ರಥೋತ್ಸವ ಜರಗುತ್ತಿತ್ತು. ಶ್ರೀಲಕ್ಷ್ಮೀನರಸಿಂಹಾದಿಕೇಶವ ದೇವಸ್ಥಾನದಿಂದ ಊರ ಹೊರಗಿರುವ ಗಡಿಕಲ್ಲದವರೆಗೆ ತೇರನ್ನು ಎಳೆಯುತ್ತಿದ್ದರು. 1952ರಲ್ಲಿ ರಥೋತ್ಸವ ಜರುಗಿದ್ದು ಅಂದಿನಿಂದ ಇಂದಿನವರೆಗೆ ರಥೋತ್ಸವ ಜರುಗಿಲ್ಲ. ಒಗ್ಗಟ್ಟಿಲ್ಲದ ಜನರು ಹಾಗೂ ದೇವಸ್ಥಾನಕ್ಕೆ ಬರುವ ಆದಾಯ ನಿಂತು ಹೋಗಿದ್ದು ಇದಕ್ಕೆ ಕಾರಣವಾಗಿದೆ. ಇದೊಂದು ಅಪರೂಪದ ತೇರಾಗಿದೆ. ಶ್ರೀಲಕ್ಷ್ಮೀನರಸಿಂಹಾದಿಕೇಶವ ದೇವಸ್ಥಾನದ ರಾಜಗೋಪುರವು ಆಕರ್ಷಣೀಯವಾಗಿತ್ತು. ಇತ್ತೀಚೆಗೆ ಪ್ರಾಧಿಕಾರವು ಇದನ್ನು ತೆಗೆದು ವಿಜಯನಗರ ಶೈಲಿಯಲ್ಲಿ ಗೋಪುರವನ್ನು ನಿರ್ಮಿಸುತ್ತಿದೆ.

 
 

ಸ್ಥಳ: ಕಾಗಿನೆಲೆ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ಕದರಮಂಡಲಗಿ ಶ್ರೀ ಕಾಂತೇಶ ರಾಜಗೋಪುರ

ಕರ್ನಾಟಕದಲ್ಲಿ ಸಾಮಾನ್ಯವಾಗಿ ಹನುಮಪ್ಪನಿಲ್ಲದ ಊರು ಸಿಗುವುದಿಲ್ಲ. ಆದರೂ ಕದರಮಂಡಲಗಿ ‘ಶ್ರೀ ಕಾಂತೇಶ’, ಸಾತೇನಹಳ್ಳಿ ‘ಶ್ರೀ ಶಾಂತೇಶ’, ಶಿಕಾರಿಪುರದ ‘ಶ್ರೀ ಬ್ರಾಂತೇಶ’-ಹೀಗೆ ಮೂವರು ಮುಖ್ಯಪ್ರಾಣರು ಜಾಗೃತಮಾನ್ಯರಾಗಿ ನಂಬಿದವರಿಗೆ ಇಂಬಿಟ್ಟು ಪೊರೆಯುತ್ತಿದ್ದಾರೆ. ಈ ಮೂವರ ದರ್ಶನ ಮಾಡಿಕೊಂಡು ಕಾಗಿನೆಲೆಯ ಆದಿಕೇಶವನ ದರ್ಶನ ಪಡೆದರೆ ಕಾಶಿಯಲ್ಲಿ ದೊರೆಯುವ ಪುಣ್ಯ ಸಿಗುತ್ತದೆ ಎಂದು ಜನರು ನಂಬಿದ್ದಾರೆ. ಆದರೆ ಬಡವರಿಗೆ ಪ್ರಯಾಣ ಮಾಡುವುದು ಕಷ್ಟಸಾಧ್ಯವಾದುದರಿಂದ ಕಾಗಿನೆಲೆ ಆದಿಕೇಶವನ ಸನ್ನಿಧಿಯಲ್ಲೇ ಮೂವರೂ ಪ್ರಾಣದೇವರನ್ನು ಸ್ಥಾಪಿಸಿದ್ದಾರೆ. ಪ್ರತಿಶ್ರಾವಣ, ಕಾರ್ತಿಕ, ಅಧಿಕಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಕಾಗಿನೆಲೆ ಒಂದರ್ಥದಲ್ಲಿ ಬಡವರ ಕಾಶಿಯಾಗಿದೆ. ಕನಕದಾಸರು ಕದರಮಂಡಲಗಿ ಕಾಂತೇಶನ ಸನ್ನಿಧಿಯಲ್ಲಿ ‘ಮೋಹನತರಂಗಿಣಿ’ ಕಾವ್ಯವನ್ನು ಬರೆದರೆಂದು ಪ್ರತೀತಿ ಇದೆ. ಈಗಲೂ ಆ ದೇವಾಲಯದಲ್ಲಿ ಮೋಹನತರಂಗಿಣಿಯ ಇತ್ತೀಚಿನ ಹಸ್ತಪ್ರತಿಯನ್ನು ಕಾಯ್ದಿರಿಸಲಾಗಿದೆ.

 

ಸ್ಥಳ: ಕದರಮಂಡಲಗಿ, ಬ್ಯಾಡಗಿ ತಾಲೂಕು, ಹಾವೇರಿ ಜಿಲ್ಲೆ.

ಕನಕ ಗೋಪುರ ಕನಕನ ಕಿಂಡಿ

ಕನಕದಾಸರು ಉಡುಪಿಯ ಶ್ರೀಕೃಷ್ಣ ದರುಶನಕ್ಕೆ ಹೋದಾಗ ಅಲ್ಲಿಯ ಮಡಿವಂತ ಜನರು ಅವರನ್ನು ತಡೆದರು. ಆಗ ಕನಕದಾಸರು ಭಕ್ತಿ ಶಕ್ತಿಗಳನ್ನೊಂದು ಮಾಡಿ ಹೋರಾಟ ಮಾಡಿದರು. ಈ ಹೋರಾಟದ ಫಲದಿಂದ ಶೂದ್ರರಿಗೆ ಹೊರಗಿನಿಂದಲೇ ದರ್ಶನ ಪಡೆಯಲು ತಂತ್ರಗಾರಿಕೆಯಿಂದ ಮಡಿವಂತರು ಕಿಂಡಿಯನ್ನು ರೂಪಿಸಿದರು. ಹೋರಾಟದ ರೂವಾರಿ ಕನಕದಾಸರೇ ಆಗಿದ್ದರಿಂದ ‘ಕನಕನಕಿಂಡಿ’ ಎಂದು ಕರೆದರು. ಕಾಲಾಂತರದಲ್ಲಿ ಕನಕನ ಕಿಂಡಿಗೆ ನವಗ್ರಹ ಕಿಂಡಿ ಎಂದು ಹೆಸರಿತ್ತರು. ಹೊರಗೋಡೆಯಲ್ಲಿ ಮತ್ತೊಂದನ್ನು ನಿರ್ಮಿಸಿ ಅದಕ್ಕೆ ಕನಕನ ಕಿಂಡಿ ಎಂದರು. ಕನಕದಾಸರ ಹೋರಾಟದ ನೆನಪಿಗೋಸ್ಕರ ಕಿಂಡಿಯ ಮುಂದೆ ವಿಜಯನಗರದ ಅರಸರು ಕನಕ ಗೋಪುರವನ್ನು ನಿರ್ಮಿಸಿದರು. ಅದನ್ನೂ ಮಡಿವಂತರು ಕೆಡವಿ ವಿವಾದ ಸೃಷ್ಟಿಸಿದರು. ಮತ್ತೆ ಜನರ ಹೋರಾಟದಿಂದ ಕನಕಗೋಪುರ ನಿರ್ಮಿಸಲಾಗಿದ್ದು ರಾರಾಜಿಸುತ್ತಿದೆ.
(ಒಳಗಿನ ಕನಕನ ಕಿಂಡಿಯ ಫೋಟೋ ತೆಗೆಯಲು ಅವಕಾಶ ಕೊಡದಿದ್ದರಿಂದ ಅನಿವಾರ್ಯವಾಗಿ ಹೊರಗೋಡೆಯಲ್ಲಿರುವ ಕಿಂಡಿಯ ಚಿತ್ರವನ್ನು ಕೊಡಲಾಗಿದೆ.)

 
 

ಸ್ಥಳ: ಉಡುಪಿ

ಕಂದಕೂರು,ಕೋಣನ ತೂಬು, ಕನಕದಾಸರು ಜಪ ಮಾಡಿದ ಸ್ಥಳ, ವ್ಯಾಸ ಸಮುದ್ರ

ದಾಸಶ್ರೇಷ್ಠ ಕನಕದಾಸರು ದಾಸ ದೀಕ್ಷೆಯನ್ನು ಸ್ವೀಕರಿಸಲು ವ್ಯಾಸರಾಯರನ್ನು ಅರಸುತ್ತ ಹೋಗುತ್ತಾರೆ. ವ್ಯಾಸರಾಯರು ಆಂಧ್ರಪ್ರದೇಶದ ಮದನಪಲ್ಲಿ ಹತ್ತಿರದ ಕಂದಕೂರಿನಲ್ಲಿ ಕೆರೆಯನ್ನು ಕಟ್ಟಿಸುತ್ತಿರುತ್ತಾರೆ. ಅಲ್ಲಿಗೆ ಬಂದ ಕನಕದಾಸರು ದಾಸ ದೀಕ್ಷೆಯನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ವ್ಯಾಸರಾಯರು ‘’ಕುರುಬಗೇನು ಕೋಣನ ಮಂತ್ರ’’ ಎಂದಾಗ ಭಕ್ತಿಯಿಂದ ಕನಕದಾಸರು ಅದನ್ನೇ ಜಪ ಮಾಡಿದಾಗ ಒಂದು ಕೋಣ ಪ್ರತ್ಯಕ್ಷವಾಗುತ್ತದೆ. ಅದನ್ನು ಕರೆದುಕೊಂಡು ವ್ಯಾಸರಾಯರ ಬಳಿಗೆ ಬಂದಾಗ ಸಾಕ್ಷಾತ್ ಯಮಧರ್ಮನ ಕೋಣವೇ ಇದಾಗಿದೆ. ಕೆರೆಯ ಕಾಲುವೆಗೆ ಅಡ್ಡಿಯಾದ ಬಂಡೆಯನ್ನು ಒಡೆದು ಹಾಕೆಂದು ವ್ಯಾಸರಾಯರು ಕನಕದಾಸರಿಗೆ ಆಜ್ಞಾಪಿಸುತ್ತಾರೆ. ವ್ಯಾಸರಾಯರ ಆಜ್ಞೆಯಂತೆ ಕನಕದಾಸರು ಆ ಬಂಡೆಯನ್ನು ಒಡೆಸಿದರೆಂಬ ಐತಿಹ್ಯವನ್ನು ಹೇಳುವ ಸ್ಥಳ ಇದಾಗಿದೆ.

 
 
 
 
 
ಸ್ಥಳ: ಕಂದಕೂರು,ಮದನಪಲ್ಲಿ ತಾಲೂಕು, ಚಿತ್ತೂರು ಜಿಲ್ಲೆ , ಆಂಧ್ರಪ್ರದೇಶ.
 

ಬರಡಿ ಕನಕದಾಸರ ಗವಿ , ಗವಿಯಲ್ಲಿರುವ ಮೂರ್ತಿ, ಕನಕದಾಸರು ಕಟ್ಟಿಸಿದ ಕೆರೆ ಮತ್ತು ನೆಟ್ಟ ಆಲದ ಮರ

ಬರಡಿಯ ಗುಡ್ಡದಲ್ಲಿ ಒಂದು ಗುಮ್ಮಟಾಕಾರದ ಬೆಟ್ಟ(ಗುಡ್ಡ)ವಿದೆ. ಅದರಲ್ಲಿ ಮೂರು ಗುಹೆಗಳಿವೆ, ಅದರಲ್ಲಿ ಒಂದನ್ನು ಮಾತ್ರ ಕನಕದಾಸರ ಗುಹೆ ಎಂದು ಕರೆಯುತ್ತಾರೆ. ಈ ಗುಹೆಯಲ್ಲಿ ಕೆಲವುಕಾಲ ಕನಕದಾಸರು ವಾಸವಾಗಿದ್ದರೆಂಬ ಪ್ರತೀತಿ ಇದೆ. ಗುಡ್ಡದ ಕೆಳಗೆ ಒಂದು ಕೆರೆಯನ್ನು ಕಟ್ಟಿಸಿ, ಆಲದ ಸಸಿಯನ್ನು ಅವರೇ ನೆಟ್ಟರೆಂದು ಸ್ಥಳೀಯರು ಹೇಳುತ್ತಾರೆ. ದೈತ್ಯಾಕಾರವಾಗಿ ಬೆಳೆದ ಆಲದ ಮರವನ್ನು ಭೂತದ ಹೆದರಿಕೆಯಿಂದ ಜನ ಕಾಲಕಾಲಕ್ಕೆ ಕತ್ತರಿಸುತ್ತ ಬಂದಿದ್ದಾರೆ.
ಬರಗಾಲ ಬಿದ್ದಾಗ ಸಮೀಪದ ಗ್ರಾಮದವರು ಸೇರಿ ಕನಕದಾಸರ ಹೆಸರಿನಿಂದ ಪರ್ವ(ಹಬ್ಬ) ಮಾಡುತ್ತಾರೆ. ಪರ್ವ ಮಾಡಿದ ನಂತರ ಮಳೆಯಾಗುವುದು ಶತಸಿದ್ಧವೆಂದು ಸ್ಥಳೀಯರು ಹೇಳುತ್ತಾರೆ. ಕನಕದಾಸರ ಹೆಸರಿನಿಂದ ತಮ್ಮ ತಮ್ಮ ಹೊಲಗಳಲ್ಲಿ ಕಾಡುಗಲ್ಲನ್ನು ಪೂಜಿಸಿಕೊಂಡು, ವಿಶೇಷ ಸಂದರ್ಭಗಳಲ್ಲಿ ಪೂಜೆ ಸಲ್ಲಿಸುತ್ತಾರೆ.

 
 
 
 
 
 

ಇತ್ತೀಚಿನ ನವೀಕರಣ​ : 12-08-2022 12:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080