ಅಭಿಪ್ರಾಯ / ಸಲಹೆಗಳು

1) ವಿಚಾರ ಸಂಕಿರಣ ಸಂವಾದ ಗೋಷ್ಠಿಗಳು

ಚಿಂತನಾ ಗೋಷ್ಠಿಗಳು/ವಿಚಾರ ಸಂಕಿರಣಗಳು/ಸಂವಾದ ಗೋಷ್ಠಿಗಳು

ವಿವಿಧ ಸಂಸ್ಥೆಗಳು, ಕಾಲೇಜುಗಳ ಸಹಕಾರದಿಂದ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಕನಕದಾಸರು ಮತ್ತು ಇತರೆ ಸಂತರ ಕುರಿತಂತೆ ತೌಲನಿಕ ವಿಚಾರ ಸಂಕಿರಣಗಳು, ಸಂವಾದ ಗೋಷ್ಠಿಗಳನ್ನು ಸಂಘಟಿಸಲಾಗುತ್ತಿದೆ. ಈವರೆಗೆ ನಡೆಸಿದ ಸಂಕಿರಣಗಳ ವಿವರ ಇಂತಿದೆ:

ಅ) ಚಿಂತನಾ ಗೋಷ್ಠಿಗಳು
ಅಧ್ಯಯನ, ವಿಚಾರ ಸಂಕಿರಣ ಹಾಗೂ ಕಮ್ಮಟಗಳಿಗೆ ಆದ್ಯತೆ ನೀಡುವ ಜೊತೆಗೆ ಕನಕದಾಸರ ಕೃತಿಗಳನ್ನು ಇತರೆ ಮಾಧ್ಯಮಗಳ ಮೂಲಕ ಅಂದರೆ ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪ, ನಾಟಕ ಮುಂತಾದ ಕಲೆಗಳ ಮೂಲಕ ನೋಡಲು ಸಾಧ್ಯವಾಗುವಂತೆ ರಾಜ್ಯದ ವಿವಿದೆಡೆಯಿಂದ ಈ ಕ್ಷೇತ್ರದಲ್ಲಿ ನುರಿತ ಪರಿಣತರನ್ನು ಆಹ್ವಾನಿಸಿ, ಸಲಹೆ ಸೂಚನೆ ಪಡೆಯುವ ಉದ್ದೇಶದಿಂದ ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಗುಲ್ಬರ್ಗಾ ಹಾಗೂ ರಾಯಚೂರು ಭಾಗದಲ್ಲಿರುವ ತಜ್ಞರೊಂದಿಗೆ ಹಾಗೂ ರಾಜ್ಯ ಸರ್ಕಾರದ ಅಕಾಡೆಮಿಗಳ ಅಧ್ಯಕ್ಷರುಗಳೊಂದಿಗೆ ಕೂಡ ಸಮಾಲೋಚಿಸಿ ಚಿಂತನಾ ಗೋಷ್ಠಿಗಳನ್ನು ನಡೆಸಲಾಗಿದೆ. ಇದುವರೆಗೂ ನಡೆದಿರುವ ಚಿಂತನಾ ಗೋಷ್ಠಿಗಳ ವಿವರ ಈ ಕೆಳಗಿನಂತಿವೆ.

ಅ) ದಿನಾಂಕ: 9.11.12 ರಂದು ಕೇಂದ್ರದ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವಿದ್ವಾಂಸರು ಹಾಗೂ ಕಲಾವಿದರ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಂಶೋಧನಾ ಕೇಂದ್ರವು ಮುಂದೆ ಯೋಜಿಸಬಹುದಾದ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಕನಕದಾಸರು ಹಾಗೂ ಸಮಕಾಲೀನ ಸಂತರ ಕೊಡುಗೆಗಳನ್ನು ಬಹುಮಾಧ್ಯಮಗಳಲ್ಲಿ ತೊಡಗಿಸಲು ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನದ ಮಾತುಗಳನ್ನು ಸಭೆಯಲ್ಲಿದ್ದ ಸದಸ್ಯರು ತಿಳಿಸಿದರು.

ಆ) ದಿನಾಂಕ: 16.11.12 ರಂದು ಅಧ್ಯಯನ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ನಾಡಿನ ಕೆಲವು ಸಾಹಿತಿಗಳ ಜೊತೆ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಇದುವರೆಗೂ ಕನಕದಾಸರ ಕುರಿತು ಆಗಿರುವ ಕೆಲಸಗಳ ಸಮೀಕ್ಷೆ ನಡೆಸಬೇಕು, ಕನಕಸಾಹಿತ್ಯಕೋಶ, ಸಾಂಸ್ಕೃತಿಕ ಅಧ್ಯಯನ, ತೌಲನಿಕ ಅಧ್ಯಯನ ಮುಂತಾದ ವಿಷಯಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.

ಇ) ದಿನಾಂಕ: 5.12.12 ರಂದು ಕರ್ನಾಟಕ ರಾಜ್ಯದ ಹಲವು ಅಕಾಡೆಮಿಯ ಅಧ್ಯಕ್ಷರ ಜೊತೆ ಅನೌಪಚಾರಿಕ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಅಭಿವ್ಯಕ್ತಿಯ ಮಾಧ್ಯಮಗಳಾದ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ನಾಟಕ, ಜಾನಪದ ಹಾಗೂ ಉಳಿದ ಮಾಧ್ಯಮ ನೆಲೆಗಳಲ್ಲಿ ಕನಕದಾಸರನ್ನು ಯುವಜನತೆಗೆ ಪರಿಚಯಿಸುವ ಬಗ್ಗೆ ಚರ್ಚಿಸಲಾಯಿತು.

೧) ದಿನಾಂಕ: 9.11.12 ರಂದು ಕೇಂದ್ರದ ಕಛೇರಿಯಲ್ಲಿ ನಡೆದ ಈ ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವಿದ್ವಾಂಸರು ಹಾಗೂ ಕಲಾವಿದರ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಂಶೋಧನಾ ಕೇಂದ್ರವು ಮುಂದೆ ಯೋಜಿಸಬಹುದಾದ ಯೋಜನೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯಿತು. ಕನಕದಾಸರು ಹಾಗೂ ಸಮಕಾಲೀನ ಸಂತರ ಕೊಡುಗೆಗಳನ್ನು ಬಹುಮಾಧ್ಯಮಗಳಲ್ಲಿ ತೊಡಗಿಸಲು ಬೇಕಾದ ಎಲ್ಲಾರೀತಿಯ ಮಾರ್ಗದರ್ಶನದ ಮಾತುಗಳನ್ನು ಸಭೆಯಲ್ಲಿದ್ದ ಸದಸ್ಯರು ಹೇಳಿದರು.

೨) ದಿನಾಂಕ: 16.11.12 ರಂದು ಅಧ್ಯಯನ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ನಾಡಿನ ಕೆಲವು ಸಾಹಿತಿಗಳ ಜೊತೆ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಇದುವರೆಗೂ ಕನಕದಾಸರ ಕುರಿತು ಆಗಿರುವ ಕೆಲಸಗಳ ಸಮೀಕ್ಷೆ ನಡೆಸಬೇಕು, ಕನಕಸಾಹಿತ್ಯಕೋಶ, ಸಾಂಸ್ಕೃತಿಕ ಅಧ್ಯಯನ, ತೌಲನಿಕ ಅಧ್ಯಯನ ಮುಂತಾದ ವಿಷಯಗಳನ್ನು ಕುರಿತು ಚರ್ಚಿಸಲಾಯಿತು.

೩) ದಿನಾಂಕ: 5.12.12 ರಂದು ಕರ್ನಾಟಕ ರಾಜ್ಯದ ಹಲವು ಅಕಾಡೆಮಿಯ ಅಧ್ಯಕ್ಷರ ಜೊತೆ ಅನೌಪಚಾರಿಕ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಅಭಿವ್ಯಕ್ತಿಯ ಬಹುಮಾಧ್ಯಮಗಳಾದ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ನಾಟಕ, ಜಾನಪದ ಹಾಗೂ ಉಳಿದ ಮಾಧ್ಯಮ ನೆಲೆಗಳಲ್ಲಿ ಕನಕದಾಸರನ್ನು ಯುವಜನತೆಗೆ ಪರಿಚಯಿಸುವ ಬಗ್ಗೆ ಚರ್ಚಿಸಲಾಯಿತು.

 

ಆ)ವಿಚಾರ ಸಂಕಿರಣ/ಸಂವಾದ ಗೋಷ್ಠಿ

ಕನಕದಾಸರ ಚಿಂತನೆ, ಸಾಹಿತ್ಯ ಮತ್ತು ಜೀವನ ದರ್ಶನ ಕುರಿತಾಗಿ ಈವರೆಗೆ ನಡೆದಿರುವ ಅಧ್ಯಯನ ಮತ್ತು ಸಂಶೋಧನೆಗಳ ನೆಲೆಗಳನ್ನು ಮತ್ತಷ್ಟು ವಿಸ್ತರಿಸುವ, ಅದರ ಹೊಸದಿಕ್ಕುಗಳನ್ನು ಗುರುತಿಸುವ ಪ್ರಯತ್ನದ ಅಂಗವಾಗಿ ಹಾಗೂ ಪ್ರಸ್ತುತ ಭಾರತೀಯ ಭಕ್ತಿ ಪಂಥದ ಸಂತ-ಸೂಫಿಗಳ ಜೀವನಮೌಲ್ಯ, ತತ್ತ್ವಾದರ್ಶ, ಸಾಮಾಜಿಕ ಕೊಡುಗೆಗಳನ್ನು ಅರಿಯುವ ಪ್ರಯತ್ನದ ಜೊತೆಗೆ ಕನಕದಾಸರ ಜೀವನ ದರ್ಶನದ ಕೂಡ ತೌಲನಿಕ ಅಧ್ಯಯನ ದೃಷ್ಟಿಯಿಂದ ವಿವಿಧ ವಿಚಾರಸಂಕಿರಣ/ ಸಂವಾದ ಗೋಷ್ಠಿಗಳನ್ನು ನಮ್ಮ ಕೇಂದ್ರದಿಂದ ನಡೆಸಲಾಗುತ್ತಿದ್ದು ಅವುಗಳ ವಿವರ ಈ ಕೆಳಗಿನಂತಿವೆ.

 

೧) ಕನಕ: ಮರುದರ್ಶನದ ಆಯಾಮಗಳು

ಈ ಸಂವಾದ ಗೋಷ್ಠಿಯನ್ನು ದಿನಾಂಕ: 22.09.2012 ರಂದು ಕನ್ನಡ ಭವನ ಬೆಂಗಳೂರು ಇಲ್ಲಿ ಏರ್ಪಡಿಸಲಾಯಿತು. ಭಾಷೆ ಮತ್ತು ಸಂಸ್ಕೃತಿ ತಜ್ಞರಾದ ಡಾ. ಕೆ.ವಿ.ನಾರಾಯಣ ಇವರು ಚಿಂತನಾ ಗೋಷ್ಠಿಗೆ ಚಾಲನೆ ನೀಡಿದರು. ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ .ಕಾ.ತ.ಚಿಕ್ಕಣ್ಣನವರು ಸಂಸ್ಥೆಯ ಉದ್ದೇಶ ಹಾಗೂ ಆಶಯಗಳನ್ನು ವಿವರಿಸಿ, ಕಾರ್ಯಕ್ರಮಗಳನ್ನು ವಿವರಿಸಿ, ಇಂದಿನ ಚಿಂತನಾ ಗೋಷ್ಠಿಯು ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಬೇಕೆಂದು ಕೋರಿದರು. ಅಲ್ಲದೆ ಕನಕರ ಕುರಿತಂತೆ ಆಗಬೇಕಿರುವ ಸಂಶೋಧನೆ ಹಾಗೂ ಅಧ್ಯಯನದ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಶಿಬಿರದ ಸಂಚಾಲಕರಾದ ಡಾ. ಬಂಜಗೆರೆ ಜಯಪ್ರಕಾಶ್ರವರು ಕನಕರನ್ನು ಜನರು ಪರಿಭಾವಿಸಿದ ಬಗೆಯನ್ನು ವಿವರಿಸಿದರು. ಚಿಂತಕರಾದ ಡಾ.ಮಲ್ಲಿಕಾರ್ಜುನ ಮೇಟಿ ‘ಕನಕರು ಕಂಡರಿಸಿದ ಜೀವನ ಗ್ರಹಿಕೆಗಳು’, ಡಾ.ಮಾನಕರಿ ಶ್ರೀನಿವಾಸಚಾರ್ಯ ‘ಕನಕ:ಭಕ್ತಿಯ ವಿಭಿನ್ನನೆಲೆಗಳು’, ಡಾ.ಕೆ.ವೈ.ನಾರಾಯಣ ಸ್ವಾಮಿ ‘ಕನಕರ ಪರಿಸರ ಸ್ಪಂದನ’ ಕುರಿತು ಟಿಪ್ಪಣಿ ಮಂಡಿಸಿದರು. ನಂತರ ಗೋಷ್ಠಿಯಲ್ಲಿ ಭಾಗವಹಿಸಿದ 40 ಜನ ವಿದ್ವಾಂಸರು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

 
 

೨) ಕನಕದಾಸರ ಸಾಹಿತ್ಯದಲ್ಲಿ ಜಾನಪದೀಯ ನೆಲೆಗಳು

ದಿನಾಂಕ : 31.10.2012 ರಂದು ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ, ಶಿವಮೊಗ್ಗ ಜಿಲ್ಲೆ ಇಲ್ಲಿ ನಡೆದ ವಿಚಾರ ಗೋಷ್ಠಿಯನ್ನು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ಎ.ಬಾರಿ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ನಿರ್ದೇಶಕರಾದ ಪ್ರೊ.ಸಣ್ಣರಾಮ ಇವರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಕಾ ತ ಚಿಕ್ಕಣ್ಣ ಅವರು ಮಾತನಾಡಿದರು. ಸಂಚಾಲಕರಾದ ಡಾ.ಶಿವಾನಂದ ಕೆಳಗಿನಮನೆ ಇವರು ಉಪಸ್ಥಿತರಿದ್ದರು.
ಗೋಷ್ಠಿ : 1. ರಲ್ಲಿ ಡಾ. ಶ್ರೀಶೈಲ ಹುದ್ದಾರರು ‘ಭಕ್ತಿ, ಭಜನೆ-ಕನಕದಾಸರ ಕೀರ್ತನೆಗಳು’ ಕುರಿತು, ಡಾ. ವೀರೇಶ ಬಡಿಗೇರ ಇವರು ‘ಕನಕದಾಸರ ಸಾಹಿತ್ಯದಲ್ಲಿ ಲೋಕದೃಷ್ಟಿ’ ಕುರಿತು, ಶ್ರೀ ಪೃಥ್ವಿರಾಜ ಕವತ್ತಾರ ಇವರು ‘ನಳಚರಿತ್ರೆ, ಮೋಹನ ತರಂಗಿಣಿ, ಜಾನಪದರಂಗ ಪರಂಪರೆ’ ಕುರಿತು ಮಾತನಾಡಿದರು.
ಗೋಷ್ಠಿ : 2. ಸಂವಾದ ಗೋಷ್ಠಿಯು ಪ್ರೊ. ಅರವಿಂದ ಮಾಲಗತ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂವಾದ ಗೋಷ್ಠಿಯಲ್ಲಿ 15 ಜನ ಸಂವಾದಕರ ಜೊತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

 

೩) ಕನಕ: ಪುನಾಗ್ರಹಿಕೆಯ ನೆಲೆಗಳು

ದಿನಾಂಕ: 06.11.2012 ರಂದು ಮೈಸೂರಿನ ಕರ್ನಾಟಕ ಕಲಾಮಂದಿರದ ಮನೆಯಂಗಳದಲ್ಲಿ ಸಂವಾದ ಗೋಷ್ಠಿ ಏರ್ಪಡಿಸಲಾಯಿತು. ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಕಾ. ತ. ಚಿಕ್ಕಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾದ ಪ್ರೊ. ಸುಧಾಕರ ಇವರು ಉಪಸ್ಥಿತರಿದ್ದರು.
ಡಾ. ಬಂಜಗೆರೆ ಜಯಪ್ರಕಾಶ್ ಇವರು ‘ಕನಕದಾಸರ ಕೃತಿಗಳಲ್ಲಿ ಜೀವನ ಮೀಮಾಂಸೆ’ ಕುರಿತು ಮಾತನಾಡಿದರು. ನಂತರ ‘ಕನಕ: ಕೃತಿ-ಸಂಸ್ಕೃತಿ ವಿಷಯವಾಗಿ ಡಾ. ಕೃಷ್ಣಮೂರ್ತಿ ಹನೂರ ಟಿಪ್ಪಣಿ ಮಂಡಿಸಿದರು. ‘ಕನಕದಾಸ: ಸಮುದಾಯ, ಸಾಂಸ್ಕೃತಿಕ ನಾಯಕತ್ವ’ ವಿಷಯವನ್ನು ಕುರಿತು ಡಾ. ಹಿ.ಶಿ.ರಾಮಚಂದ್ರೇಗೌಡ ಇವರು ಮಾತನಾಡಿದರು.
ಪ್ರತಿ ವಿಷಯ ಮಂಡನೆಯ ನಂತರ ಭಾಗವಹಿಸಿದ 80 ಜನ ಸಂವಾದಕರು ಸಕ್ರಿಯವಾಗಿ ಚರ್ಚೆಯಲ್ಲಿ ತೊಡಗಿಕೊಂಡರು. ಈ ಸಂವಾದ ಗೋಷ್ಠಿಯು ಉತ್ತಮ ಪ್ರತಿಕ್ರಿಯೆಗಳೊಂದಿಗೆ ಸಂವಾದದೊಂದಿಗೆ ಯಶಸ್ವಿಯಾಗಿ ನೆರವೇರಿತು.

 
 
 

೪) ಕನಕದಾಸರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ

ದಿನಾಂಕ: 22.11.2012 ರಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪುರ ಇಲ್ಲಿ ನಡೆದ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಮೀನಾ ಆರ್ ಚಂದಾವರಕರ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ.ಎಸ್.ಮೂರ್ತಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ಕಾ ತ ಚಿಕ್ಕಣ್ಣನವರು ಮಾತನಾಡಿದರು. ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಆರ್.ಸುನಂದಮ್ಮ ಇವರು ಉಪಸ್ಥಿತರಿದ್ದರು.
ಪ್ರೊ. ಚನ್ನಪ್ಪಕಟ್ಟಿಯವರು ‘ಮೋಹನ ತರಂಗಿಣಿ ಕೃತಿಯಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ’ ಕುರಿತು ಟಿಪ್ಪಣಿ ಮಂಡಿಸಿದರು. ನಂತರ ಶ್ರೀ ಪೀರಬಾಷಾ ಇವರು ‘ನಳಚರಿತ್ರೆಯಲ್ಲಿ ಸ್ತ್ರೀ ಸಂವೇದನೆಯ ನೆಲೆ’ಯನ್ನು ಕುರಿತು, ಡಾ.ಆರ್.ಸುನಂದಮ್ಮ ಇವರು ‘ವೈದಿಕ ಧಾರ್ಮಿಕತೆ: ಕನಕದಾಸರ ಕೀರ್ತನೆಗಳು ಮತ್ತು ಮಹಿಳೆ’ ಕುರಿತು ಹಾಗೂ ದು. ಸರಸ್ವತಿಯವರು ‘ಕನಕದಾಸರ ಕೀರ್ತನೆಗಳಲ್ಲಿ ಸ್ತ್ರೀಯರ ಅಭಿವ್ಯಕ್ತಿ’ ಕುರಿತು ಟಿಪ್ಪಣಿ ಮಂಡಿಸಿದರು.
ಗೋಷ್ಠಿಯ ವಿಷಯಗಳ ಮೇಲೆ 25 ಜನ ಸಂವಾದಕರ ಜೊತೆ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.

 
 
 

೫) ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ಸಂವೇದನೆಯ ನೆಲೆಗಳು

ದಿನಾಂಕ: 12.01.2013 ರಂದು ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೀದರ ಇವರ ಸಹಯೋಗದಲ್ಲಿ ವಿಚಾರ ಸಂಕಿರಣ ನಡೆಸಲಾಯಿತು. ಈ ವಿಚಾರ ಸಂಕಿರಣದ ಒಟ್ಟು ನಾಲ್ಕುಗೋಷ್ಠಿಗಳಲ್ಲಿ ನಾಲ್ಕುಜನ ವಿದ್ವಾಂಸರು ವಿಷಯ ಮಂಡಿಸಿದರು. ‘ಕನಕದಾಸರು-ಕೃತಿ-ಸಂಸ್ಕೃತಿ’ ಎಂಬ ವಿಷಯ ಕುರಿತು ಡಾ.ಶಿವಾನಂದ ವಿರಕ್ತಿ ಮಠ – ಹಂಪಿ, ‘ಕನಕದಾಸರ ಪ್ರತಿರೋಧಕ ನೆಲೆಗಳು’ ಎಂಬ ವಿಷಯ ಕುರಿತು ಡಾ. ಶಿವಗಂಗಾರುಮ್ಮ- ಗುಲ್ಬರ್ಗಾ, ‘ವಿಶ್ವಸಂಸ್ಥೆಯ ಸಂವಿಧಾನ ಮತ್ತು ಕನಕದಾಸರು’ ಎಂಬ ವಿಷಯ ಕುರಿತು ಪ್ರೊ. ವಸಂತ ಕುಷ್ಟಗಿ – ಗುಲ್ಬರ್ಗಾ, ‘ಕನಕದಾಸರ ಕಾರ್ಪಣ್ಯ’ ಎಂಬ ವಿಷಯ ಕುರಿತು ಡಾ. ವಾಸುದೇವ ಅಗ್ನಿಹೋತ್ರಿ – ಸೇಡಂ ಪ್ರಬಂಧ ಮಂಡಿಸಿದರು. 16 ಜನ ಸಂವಾದಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು. ನಂತರ ನಡೆದ ಕನಕಕಾವ್ಯ ಗೋಷ್ಠಿಯಲ್ಲಿ 17 ಕವಿಗಳು ಭಾಗವಹಿಸಿದ್ದರು. ಈ ಕಾವ್ಯ ಗೋಷ್ಠಿಯನ್ನು ಡಾ. ಜಗದೇವಿತಿಬಶೆಟ್ಟಿ ಮತ್ತು ಶ್ರೀಮತಿ ಧನಲಕ್ಷ್ಮೀ ಪಾಟೀಲ್ರವರು ಯಶಸ್ವಿಯಾಗಿ ನಡೆಸಿಕೊಟ್ಟರು.

 
 
 
 

೬) ಸಂತಕವಿ ಕನಕದಾಸರು: ವರ್ತಮಾನದ ಯುವ ನೋಟ

ಈ ಸಂಕಿರಣ ಸಂವಾದಗೋಷ್ಠಿಯನ್ನು ದಿನಾಂಕ: 05.3.2013 ರಂದು ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಲಾಯಿತು. ವಿದ್ಯಾರ್ಥಿಗಳೇ ವಿಷಯ ಮಂಡಿಸಿ, ಮಂಡಿಸಿದ ವಿಷಯ ಕುರಿತು ವಿದ್ಯಾರ್ಥಿಗಳೇ ಸಂವಾದ ನಡೆಸಿದ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. ಪ್ರತಿ ವಿಷಯ ಮಂಡಕರಿಗೆ ಪ್ರಾಧ್ಯಾಪಕರೊಬ್ಬರು ಮಾರ್ಗದರ್ಶಕರಾಗಿ ಭಾಗವಹಿಸಿದ್ದರು.
(ಅ)‘ತಲ್ಲಣಿಸದಿರು ಕಂಡ್ಯ ತಾಳು ಮನವೆ’: ಎಂಬ ವಿಷಯದ ಬಗ್ಗೆ ಶ್ರೀಮತಿ. ಎಂ.ಎಸ್.ಅನಿತಾ
(ಆ)‘ರಕ್ಷಿಸು ನಮ್ಮನನವರತ’: ಎಂಬ ವಿಷಯದ ಬಗ್ಗೆ ಶ್ರೀಮತಿ ಎಂ.ಎನ್. ಶುಭಶ್ರೀ ಪ್ರಸಾದ್
(ಇ)‘ರಾಮಧಾನ್ಯ ಚರಿತೆ’’: ಎಂಬ ವಿಷಯದ ಬಗ್ಗೆ ಶ್ರೀ ಬಿ.ಸಿ.ಅಶೋಕ
(ಈ) ‘ತೀರ್ಥಪಿಡಿದವರೆಲ್ಲ ತಿರುನಾಮಧಾರಿಗಳೆ’ ಎಂಬ ವಿಷಯದ ಬಗ್ಗೆ ಶ್ರೀಮತಿ ಕೆ.ಅಶ್ವಿನಿ ಇವರು ವಿಷಯವನ್ನು ಮಂಡಿಸಿದರು. 81 ಜನ ವಿದ್ಯಾರ್ಥಿನಿಯರು ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ವಿಶಿಷ್ಟ ಕಾರ್ಯಕ್ರಮವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಂ.ಜಿ.ಕೃಷ್ಣನ್ ಅವರು ಉದ್ಘಾಟಿಸಿದರು. ಶ್ರೀ ಹುಲಿಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಸಿದ್ಧಪಡಿಸಿದ ‘ಸಂತಕವಿ ಕನಕದಾಸರು’ ಎಂಬ ಕಿರುಚಿತ್ರವನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಶ್ರೀ ಕಾ.ತ.ಚಿಕ್ಕಣ್ಣ ಅವರ ಸಾಹಿತ್ಯದಲ್ಲಿ ಕರ್ನಾಟಕ ಸರ್ಕಾರದಿಂದ ಈ ಕಿರುಚಿತ್ರ ನಿರ್ಮಿಸಲಾಗಿದೆ.

 
 
 
 

೭) ಕಾಲುದಾರಿ ಸಂತಪರಂಪರೆ ಮತ್ತು ಕನಕದಾಸರು

ಕನಕದಾಸರ ಬಗ್ಗೆ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಕೋಲಾರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ದಿನಾಂಕ 24.09.2013 ಹಾಗೂ 25.9.2013 ರಂದು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಕಾರದಿಂದ ನಡೆಸಲಾಯಿತು. ನಾಲ್ಕು ಗೋಷ್ಠಿಗಳನ್ನು ಅಳವಡಿಸಲಾಗಿತ್ತು.
ಸಂತರು-ತಾತ್ವಿಕ ವಿವೇಚನೆ ಎಂಬ ಮೊದಲನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ರಹಮತ್ ತರೀಕೆರೆ ವಹಿಸಿಕೊಂಡು ‘ಸಾಮಾಜಿಕ ಒತ್ತಾಸೆಗಳು’ ಎಂಬ ವಿಷಯವನ್ನು ಮಂಡಿಸಿದರು ‘ದಾರ್ಶನಿಕ ಬಹುತ್ವ’ ಎಂಬ ವಿಷಯವನ್ನು ಡಾ.ಬಂಜಗೆರೆಜಯಪ್ರಕಾಶ್ ಅವರು, ‘ಚಾರಿತ್ರಿಕ ಸಂದರ್ಭ’ ಎಂಬ ವಿಷಯವನ್ನು ಮಂಡಿಸಬೇಕಿದ್ದ ಡಾ. ಎಂ.ವಿ.ವಸು ಅವರು ಕಾರಣಾಂತರಗಳಿಂದ ಬಾರದ ಕಾರಣ ಅವರ ಬದಲಿಗೆ ಡಾ. ಸುಬ್ರಹ್ಮಣ್ಯಸ್ವಾಮಿ ಅವರು ವಿಷಯವನ್ನು ಮಂಡಿಸಿದರು.
ಭಾರತದ ಅಲಕ್ಷಿತ ಸಂತರು ಮತ್ತು ಕನಕದಾಸರು ಎಂಬ ಎರಡನೆಯ ಗೋಷ್ಠಿಯ ಅಧ್ಯಕ್ಷತೆಯನ್ನು
ಡಾ ಟಿ. ಎಸ್. ಸತ್ಯನಾಥ್ ವಹಿಸಿಕೊಂಡು ‘ಅರಹುವಸಾಧ್ಯತೆಗಳು’ ಎಂಬವಿಷಯವನ್ನು; ‘ತೌಲನಿಕ ನೋಟಗಳು’ ಎಂಬ ವಿಷಯವನ್ನು ಡಾ. ಡಿ. ಡೊಮಿನಿಕ್ ಅವರು; ‘ವಿಚಾರಾಕೃತಿಯ ನೆಲೆಗಳು’ ಎಂಬ ವಿಷಯವನ್ನು ಪ್ರೊ. ಜಯಪ್ರಕಾಶ್ ಶೆಟ್ಟಿ ಕುಂದಾಪುರ ಅವರು ಮಂಡಿಸಿದರು.
ಕನ್ನಡ ಕಾಲುದಾರಿ ಪಂಥಗಳು (ನಾಥ, ಸಿದ್ದ, ಅವಧೂತ,ಸೂಫಿ ಇತರೆ ಶ್ರಮಣಧಾರೆಗಳು) ಎಂಬ ಮೂರನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಚಂದ್ರಶೇಖರ ನಂಗಲಿ ವಹಿಸಿ ‘ಗಂಗವಾಡಿ ಸೀಮೆ’ ಎಂಬ ವಿಭಾಗದ ಸಂತರ ವಿಷಯ ಕುರಿತು ಟಿಪ್ಪಣಿ ಮಂಡಿಸಿದರು.
‘ಕಲ್ಯಾಣಸೀಮೆ’ ಎಂಬ ವಿಭಾಗದ ಸಂತರ ಕುರಿತು ಡಾ.ಸಿ.ಬಿ.ಚಿಲ್ಕಾರಾಗಿ ಅವರು ‘ಬೆಳುವಲ ಸೀಮೆ’ ಎಂಬ ವಿಭಾಗದ ವಿಷಯ ಕುರಿತು ಪ್ರೊ.ಶಂಕರಕಟಗಿ ಅವರು; ‘ಬಯಲು ಸೀಮೆ’ ಎಂಬ ವಿಭಾಗದ ವಿಷಯ ಕುರಿತು ಡಾ. ನಟರಾಜ್ ಬೂದಾಳ್ ಅವರು ವಿಷಯ ಮಂಡಿಸಿದರು. ಕನ್ನಡ ನುಡಿ ಬದುಕು ಮತ್ತು ಸಂತ – ಅನುಸಂಧಾನ ಎಂಬ ನಾಲ್ಕನೆಯ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ ಕೆ. ಮರುಳಸಿದ್ದಪ್ಪ ವಹಿಸಿದ್ದರು. ‘ಕನ್ನಡ ನುಡಿ ಮತ್ತು ಭಕ್ತಿಯ ನೆಲೆಗಳು’ ಎಂಬ ವಿಷಯವನ್ನು ಶ್ರೀ ಪದ್ಮಾಲಯ ನಾಗರಾಜ್ ಅವರು; ‘ಹಾಡು ಮತ್ತು ಕಾಯಕ ಜೀವಿಗಳು’ ಎಂಬ ವಿಷಯವನ್ನು ಡಾ.ಕೆ.ವೈ.ನಾರಾಯಣ ಸ್ವಾಮಿ ಅವರು; ‘ಸ್ಥಳೀಯ ಜ್ಞಾನ ಪರಂಪರೆ ಮತ್ತು ಸಂತರು’ ಎಂಬ ವಿಷಯವನ್ನು ಶ್ರೀಮತಿ ಆರ್ ಸುನಂದಮ್ಮ ಅವರು ಮಂಡಿಸಿದರು.
ಈ ವಿಚಾರ ಸಂಕಿರಣದಲ್ಲಿ ಒಟ್ಟು 30 ಜನ ವಿದ್ವಾಂಸರು ಸಂವಾದಕರಾಗಿ ಪಾಲ್ಗೊಂಡು ಮಂಡಿತ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸಿದರು. ಪದವಿ ಹಾಗೂ ಸ್ನಾತಕೋತ್ತರ ಪದವಿಯ ಸುಮಾರು 500 ವಿದ್ಯಾರ್ಥಿಗಳು ಎರಡು ದಿನಗಳೂ ಆಸಕ್ತಿಯಿಂದ ಕುಳಿತು ಚರ್ಚೆಯಲ್ಲಿ ಕೆಲವರು ಭಾಗವಹಿಸಿದರು. ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದ ಈ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಭಾಗವಹಿಸಿ ಸಮಾರೋಪ ನುಡಿ ನಡೆಸಿಕೊಟ್ಟರು. ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾದ ಶ್ರೀ ಸುದರ್ಶನ್ ಉಪಸ್ಥಿತರಿದ್ದರು.

ಈ ವಿಚಾರ ಸಂಕಿರಣದಲ್ಲಿ ಒಟ್ಟು 30 ಜನ ವಿದ್ವಾಂಸರು ಸಂವಾದಕರಾಗಿ ಪಾಲ್ಗೊಂಡು ಮಂಡಿತ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸಿದರು. ಪದವಿ ಹಾಗೂ ಸ್ನಾತಕೋತ್ತರ ಪದವಿಯ ಸುಮಾರು 500 ವಿದ್ಯಾರ್ಥಿಗಳು ಎರಡು ದಿನಗಳೂ ಆಸಕ್ತಿಯಿಂದ ಕುಳಿತು ಚರ್ಚೆಯಲ್ಲಿ ಕೆಲವರು ಭಾಗವಹಿಸಿದರು. ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದ ಈ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸಮಾರೋಪ ನುಡಿ ನಡೆಸಿಕೊಟ್ಟರು. ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾದ ಶ್ರೀ ಸುದರ್ಶನ್ ಉಪಸ್ಥಿತರಿದ್ದರು.

 

 

೮) ಸಂಗೀತ ಕ್ಷೇತ್ರದಲ್ಲಿ ಕನಕದಾಸರು : ಪ್ರಯೋಗ, ಫಲಶೃತಿ

 

 
 
 
 
 

ಒಂದು ದಿನದ ಸೋದಾಹರಣ ವಿಚಾರ ಸಂಕಿರಣ
ದಿನಾಂಕ: 2015ರ ಸೆಪ್ಟೆಂಬರ್ 29, ಮಂಗಳವಾರ
ಸ್ಥಳ: ವಿಜಯಾ ಕಾಲೇಜು, 4ನೆಯ ಬ್ಲಾಕ್, ಜಯನಗರ, ಬೆಂಗಳೂರು ಇಲ್ಲಿ ನಡೆಯಿತು.

 

 

೯) ತಳಸಮುದಾಯಗಳು ಮತ್ತು ಕನಕದಾಸರ ಸಾಂಸ್ಕøತಿಕ ಅಭಿವ್ಯಕ್ತಿ

ಈ ವಿಚಾರ ಸಂಕಿರಣವನ್ನು ದಿನಾಂಕ: 01.04.2016ರಂದು ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಕಟ್ಟಡ ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು ಇಲ್ಲಿ ಏರ್ಪಡಿಸಲಾಯಿತು. ವಿಚಾರ ಸಂಕಿರಣದ ಉದ್ಘಾಟನೆಯನ್ನು ಪ್ರೊ.ಬಿ.ತಿಮ್ಮೇಗೌಡ, ಮಾನ್ಯಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ ಇವರು ಹಾಗೂ ಅಧ್ಯಕ್ಷತೆಯನ್ನು ಶ್ರೀ ಎಚ್.ಎಂ.ರೇವಣ್ಣ, ಮಾಜಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರು ವಹಿಸಿದ್ದರು.
ಗೋಷ್ಠಿ – 1 ತಳಸಮುದಾಯದ ಸಾಂಸ್ಕøತಿ ವಕ್ತಾರರಾಗಿ ಕನಕದಾಸರು ಕುರಿತು ಡಾ. ರಾಜಪ್ಪ ದಳವಾಯಿ ಇವರು ಮಾತನಾಡಿದರು.
ಗೋಷ್ಠಿ – 2 ತಳಸಮುದಾಯದ ಸಾಮಾಜಿಕ ನೆಲೆ ಮತ್ತು ಕನಕದಾಸರ ಚಿಂತನೆಗಳು ಈ ವಿಷಯ ಕುರಿತು ಡಾ. ಜಾಜಿದೇವೇಂದ್ರಪ್ಪ
ಗೋಷ್ಠಿ – 3 ಭಾಷಿಕ ನೆಲೆಯಲ್ಲಿ ಕನಕದಾಸರು ಕುರಿತು ಡಾ. ಎಚ್.ಶಶಿಕಲಾ
ಗೋಷ್ಠಿ – 4 ತಳಸಮುದಾಯ ಹಾಗೂ ಕನಕದಾಸರ ಭಕ್ತಿ ಮಾರ್ಗ ಕುರಿತು ಪ್ರೊ. ಎಸ್.ಚಂದ್ರಕಿರಣ – ಇವರುಗಳು ಗೋಷ್ಠಿಯಲ್ಲಿ ವಿಷಯ ಮಂಡಿಸಿದರು. ಚರ್ಚೆಗೆ 200 ಜನ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.

 
 
 
 
 

೧೦) ಕನಕ:ಕಾವ್ಯ-ಕಾಲ-ಸಮಾಜ ಮತ್ತು ವರ್ತಮಾನದ ನೋಟ

ದಿನಾಂಕ: 12.04.2016 ರಂದು ಅಲ್ಲಮ ಕನ್ನಡ ಸ್ನಾತಕೋತ್ತರ ಕೇಂದ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ ಇಲ್ಲಿ ವಿಚಾರ ಸಂಕಿರಣವನ್ನು ಏರ್ಪಡಿಸಲಾಯಿತು. 
ಭಾಗಿಗಳು: 100 ಜನ

 
 
 
 
 
 
ವಿಚಾರ ಸಂಕಿರಣಗಳು:
 

೧೧). ಕನಕ: ವರ್ತಮಾನದ ನಿರೂಪಣೆಗಳು :
ಸ್ಥಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು

೧೬ನೆಯ ಶತಮಾನದಲ್ಲಿ ಆಗಿ ಹೋದ ಕನಕದಾಸರು ಇವತ್ತಿನ ವರ್ತಮಾನದಲ್ಲೂ ಹೇಗೆ ಪ್ರಸ್ತುತವಾಗುತ್ತಿದ್ದಾರೆ, ಯಾವ ದೃಷ್ಟಿಕೋನಗಳಲ್ಲಿ ಹೊಸ ಹೊಸ ಹೊಳಹುಗಳನ್ನು ಒದಗಿಸಿ ಸಾಮಾಜಿಕ ಮತ್ತು ಪಾರಮಾರ್ಥಿಕವಾಗಿ ನಿರೂಪಣೆಗಳನ್ನು ರೂಪಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ತೆರೆದು ತೋರಿಸುತ್ತಿದ್ದಾರೆ ಎಂಬ ಬಗ್ಗೆ ವಿಚಾರ ವಿನಿಮಯ ಮಾಡಿದ ಸಂವಾದಗೋಷ್ಠಿ.

 

 

೧೨) ಕನಕ-ಕೃಷ್ಣ :
ಕಡಲತಡಿ ಮಾತುಕತೆ : ಸ್ಥಳ: ಜನಪ್ರತಿನಿಧಿ, ಕುಂದಾಪುರ ದಿನಾಂಕ:೨೯.೦೬.೨೦೧೪

ಮಧ್ವ ಪರಂಪರೆಯಲ್ಲಿ ಕೃಷ್ಣ, ಜಾನಪದ ಪರಂಪರೆಯಲ್ಲಿ ಕೃಷ್ಣ ಹಾಗೂ ಕನಕದಾಸರ ಸಮಾಜಿಮುಖಿ ನಿಲುವು ಮತ್ತು ಭಕ್ತಿಯ ನಿರ್ವಹಣೆ ಕುರಿತಂತೆ ಏರ್ಪಡಿಸಿದ ಒಂದು ದಿನದ ಸಂಕಿರಣ. ಈ ವಿಚಾರ ಸಂಕಿರಣವನ್ನು ದಿನಾಂಕ:೨೯.೦೬.೨೦೧೪ರಂದು ಬೀಜಾಡಿ, ಕಡಲ ಕಿನಾರೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ಏರ್ಪಡಿಸಲಾಯಿತು.

 

 

೧೩). ದಾಸ ಸಾಹಿತ್ಯದಲ್ಲಿ ಕೆಳ ಸಮುದಾಯಗಳ ಕೀರ್ತನಕಾರರು:
ಸ್ಥಳ: ಹಟ್ಟಿ ಚಿನ್ನದ ಗಣಿ, ರಾಯಚೂರು ದಿನಾಂಕ:೨೦ ಮತ್ತು ೨೧.೦೨.೨೦೧೩

ಭಾರತೀಯ ಸಂಸ್ಕೃತಿಯಲ್ಲಿ `ಭಕ್ತಿ’ ಅನುಭಾವಿಕ ನೆಲೆಯಲ್ಲಿ ಕನಕರು ಹಿಡಿದ ಹಾದಿ, ಕಂಡುಕೊಂಡ ಸತ್ಯದರ್ಶನ, ತೋರಿದ ಮಾರ್ಗದರ್ಶನ, ಭಕ್ತಿ ಪಂಥದಲ್ಲೆ ಇರುವ ವಿವಿಧ ತಾತ್ವಿಕ ನೆಲೆಗಟ್ಟುಗಳು, ಅವರ ಸಿದ್ಧಾಂತಗಳು, ತಳವರ್ಗದಲ್ಲಿ ಹುಟ್ಟಿ ಅನುಭವಿಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರ್ಘಷಗಳ ಬಗ್ಗೆ ಇತರೆ ತಳಸಮುದಾಯದ ಕೀರ್ತನಕಾರರೊಂದಿಗೆ ಸಮೀಕರಿಸಿ ನಡೆಸಿದ ವಿಚಾರ ಸಂಕಿರಣ.

 

 

೧೪). ಕನಕದಾಸರು ಮತ್ತು ಭಕ್ತಿ ಪಂಥಗಳ ಸಾಮಾಜಿಕ ಆಯಾಮಗಳು:
ಸ್ಥಳ: ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ ದಿನಾಂಕ:೨೬ ಮತ್ತು ೨೭.೦೨.೨೦೧೪

ಸಾಂಸ್ಕೃತಿಕ ಮತ್ತು ಬದುಕಿನ ಬಗೆಗಿನ ಚಿಂತನೆಗಳನ್ನು ಚರ್ಚಿಸುವ ಮೂಲಕ ಇಂದಿನ ಅಧ್ಯಾತ್ಮಿಕ ನೆಲೆಗಳನ್ನು ಅರ್ಥಮಾಡಿಕೊಳ್ಳುವುದು, ಏಕತೆಯಿಂದ ವಿವಿಧತೆಯನ್ನು ಉಳಿಸುವ ಹಾಗೂ ಗೌರವಿಸಬೇಕಾಗಿರುವ ಸಂಗತಿಯನ್ನು ಈಗಿನ ಪೀಳಿಗೆಗೆ ಪರಿಚಯಿಸಿದ ರಾಷ್ಟಿಯ ವಿಚಾರ ಸಂಕಿರಣ.

 

 

೧೫). ಕನಕದಾಸರು – ಸಮಕಾಲೀನ ಗ್ರಹಿಕೆಗಳು :
ಸ್ಥಳ: ನಯನ ಸಭಾಂಗಣ ದಿನಾಂಕ:೯.೦೯.೨೦೧೪

ಕನಕದಾಸರ ಕಾವ್ಯ ಕೃತಿಗಳು ಮತ್ತು ಕೀರ್ತನೆಗಳಲ್ಲಿ ತಮ್ಮ ಕಾಲದ ತಲ್ಲಣಗಳನ್ನು ಎಲ್ಲ ಕಾಲಕ್ಕೂ ಸಲ್ಲುವಂತೆ ಪ್ರತಿಪಾದಿಸಿರುವುದು ಅವರ ಸಾಹಿತ್ಯಕ ಸಾಮರ್ಥ್ಯವನ್ನು ತೋರಿಸುತ್ತದೆ. ಹೀಗೆ ಸಮಾಜದೊಂದಿಗೆ ಸದಾ ಸಂವಾದ ನಡೆಸುವ ಕನಕದಾಸರ ವಿವಿಧ ಮುಖಗಳನ್ನು ವಿವೇಚಿಸಿದ ರಾಷ್ಟಿಯ ವಿಚಾರ ಸಂಕಿರಣ.

 

 

೧೬).ಕನಕದಾಸರ ಕಾವ್ಯ ಮತ್ತು ಸಂಗೀತ ಸಂಕಿರಣ :
ಡಾ ವಿದ್ವಾನ್ ಆರ್.ಕೆ. ಶ್ರೀಕಂಠನ್ ಟ್ರಸ್ಟ್, ಮಲ್ಲೇಶರಂ, ಬೆಂಗಳೂರು

ಕನಕದಾಸರ ಸಾಹಿತ್ಯಕ ಮೌಲ್ಯದ ಜೊತೆಗೆಯೇ ಸಂಗೀತಕ್ಕೆ ಸಲ್ಲಿಸಿರುವ ಕೊಡುಗೆ ಅಪಾರವಾದದ್ದು. ಕಾವ್ಯ ಮತ್ತು ಸಂಗೀತದ ಕೊಡುಗೆಯನ್ನು ವಿವೇಚಿಸಿದ ಒಂದು ದಿನದ ವಿಚಾರ ಸಂಕಿರಣ.

 

 

೧೭).ಕನಕದಾಸರು :
ಸ್ಥಳ ಕನ್ನಡ ಸಾಹಿತ್ಯ ಪರಿಷತ್ತು, ಮಹರಾಷ್ಟ್ರ ಘಟಕ, ಮುಂಬೈ ದಿನಾಂಕ:೨೪ ರಿಂದ ೨೬.೦೧.೨೦೧೫

ಕನಕದಾಸರ ಅಧ್ಯಾತ್ಮಕ ವಿಚಾರಗಳನ್ನು ಸಾಮಾಜಿಕ ನೆಲೆಯಲ್ಲಿ ವಿವೇಚಿಸಿದ ವಿಚಾರಗೋಷ್ಠಿ.

 

 

೧೮). ವರ್ತಮಾನದ ತಲ್ಲಣಗಳು-ಸಾಂಸ್ಕೃತಿಕ ಪ್ರತಿಕ್ರಿಯೆ [ಸಂಗಮ ಸಂಭ್ರಮ] :
ಸ್ಥಳ:ಪಿಳಿಕುಳ, ಮಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು ಸೇರಿ ವಿನ್ಯಾಸಗೊಳಿಸಿದ ಎರಡು ದಿನಗಳ ಸಾಂಸ್ಕೃತಿಕ ಸಮ್ಮೇಳನ.

 

 

೧೯).ಮಧ್ಯಕಾಲೀನ ಚರಿತ್ರೆ ಮತ್ತು ಕನಕದಾಸರ ಸಾಹಿತ್ಯ :
ಸ್ಥಳ: ಸರ್ ಎಂ.ವಿ.ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ ದಿನಾಂಕ:೧೩.೦೩.೨೦೧೫

ಕನಕದಾಸರ ಕಾವ್ಯವನ್ನು ಕೇಂದ್ರವಾಗಿರಿಸಿಕೊಂಡು ಮಧ್ಯಕಾಲೀನ ಸಮಾಜದಲ್ಲಿನ ಪ್ರಭುತ್ವದ ನೆಲೆಗಳು, ಕುಲಗಳ ಮರುಸಂರಚನೆ, ಕನಕದಾಸರು ಮಂಡಿಸುವ ಕುಲದ ನಿರ್ವಚನೆ, ಸಾಮಾಜಿಕ ಚರಿತ್ರೆ ಹಾಗೂ ಸಾಂಸ್ಕೃತಿಕ ಚರಿತ್ರೆಯ ಮುಖಾಮುಖಿ ಕುರಿತಂತೆ ನಡೆದ ಸಂವಾದಗೋಷ್ಠಿ.

 

 

೨೦).ತಲ್ಲಣಿಸದಿರು ಕಂಡ್ಯ ತಾಳು ಮನವೆ :
ಸ್ಥಳ: ಆಕಾಶವಾಣಿ ಹಾಗೂ ಭಾರತೀಯ ವಿದ್ಯಾ ಭವನ, ಬೆಂಗಳೂರು ದಿನಾಂಕ:೨೭.೦೫.೨೦೧೫

ಕನಕದಾಸರ ತಲ್ಲಣಗಳು ಕೇವಲ ವೈಯಕ್ತಿಕ ನೆಲೆಯಲ್ಲಿ ಹುಟ್ಟಿಕೊಂಡಿದ್ದಲ್ಲ. ಸಾಮಾಜಿಕ, ರಾಜಕೀಯ ಹಾಗೂ ಪಾರಮಾರ್ಥಿಕ ನೆಲೆಯಲ್ಲಿ ಅವರು ಕಂಡರಿಸುವ ತಲ್ಲಣಗಳ ಹಲವು ಮುಖಗಳ ವಿವೇಚನೆ ಈ ಸಂಕಿರಣದ ಉದ್ದೇಶ.

 

 

೨೧).ದೃಶ್ಯ ಮಾಧ್ಯಮಗಳಲ್ಲಿ ಕನಕದಾಸರು : ಅಭಿವ್ಯಕ್ತಿ ಆಯಾಮಗಳು : ಸ್ಥಳ: ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ದಿನಾಂಕ:೬.೦೬.೨೦೧೫

ಭಕ್ತ ಕನಕದಾಸ ಚಲನಚಿತ್ರ ಹಾಗೂ ಕನಕರ ಕುರಿತ ಪ್ರಧಾನ ನಾಟಕಗಳ ಕಿರು ಸನ್ನಿವೇಶಗಳ ಪ್ರದರ್ಶನದ ಸಹಿತ ವಿಷಯ ಮಂಡಿಸಿ ಸಂವಾದದ ಮುಖಾಂತರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

 

 

೨೨). ಸಂತಕವಿ ಕನಕದಾಸರು :ವಿವಿಧ ಆಯಾಮಗಳು
ಸ್ಥಳ : ವರ್ಣ ಆರ್ಟ್ ಗ್ಯಾಲರಿ, ಕನ್ನಡ ಭವನ, ಬೆಂಗಳೂರು

ಕನಕ ಸಾಹಿತ್ಯವನ್ನು ವಿಭಿನ್ನ ನೆಲೆಯಲ್ಲಿ ಅರ್ಥೈಸಲು ಹಾಗೂ ಕನಕ ಸಾಹಿತ್ಯವನ್ನು ಹೊಸ ರೀತಿಯಲ್ಲಿ ಚಿತ್ರ ರಚಿಸುವ ಮೂಲಕ ಸಾಧ್ಯ ಮಾಡಿಕೊಡುವಂತೆ ವಿನ್ಯಾಸಗೊಳಿಸಿದ ಎರಡು ದಿನಗಳ ಕಮ್ಮಟ.

 

 

೨೩).ಬಯಲು ಆಲಯದೊಳಗೊ :
ಸ್ಥಳ: ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ದಿನಾಂಕ:೧೩ ಮತ್ತು ೧೪.೦೮.೨೦೧೫

ಕನಕ ಸಾಹಿತ್ಯವನ್ನು ವಿಭಿನ್ನ ನೆಲೆಯಲ್ಲಿ ಅರ್ಥೈಸಲು ಹಾಗೂ ಕನಕ ಸಾಹಿತ್ಯವನ್ನು ಹೊಸ ರೀತಿಯಲ್ಲಿ ಆಲೋಚಿಸಲು ಸಾಧ್ಯ ಮಾಡಿಕೊಡುವಂತೆ ವಿನ್ಯಾಸಗೊಳಿಸಿದ ಎರಡು ದಿನಗಳ ರಾಷ್ಟಿಯ ವಿಚಾರ ಸಂಕಿರಣ.

 

 

೨೪).ವ್ಯಕ್ತಿತ್ವ ನಿರ್ಮಾಣದ ನೆಲೆಗಳು: ಕನಕದಾಸ:
ಸ್ಥಳ : ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ಬಿಜಾಪುರ ದಿನಾಂಕ:೧೪ ಮತ್ತು ೧೫.೦೯.೨೦೧೫

ತಳಸಮುದಾಯದಿಂದ ಬಂದ ಕನಕದಾಸರು ವ್ಯಕ್ತಿತ್ವ ನಿರ್ಮಾಣದ ನೆಲೆಯಲ್ಲಿ ತಾವೇ ರೂಪಿಸಿಕೊಂಡು ನಿರ್ವಹಿಸಿದ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಪ್ರತಿಪಾದಿಸಿದ ಕೊಡುಗೆಯನ್ನು ಕೇಂದ್ರವಾಗಿರಿಸಿಕೊಂಡು ವಿಶ್ಲೇಷಿಸಿದ ಸಂಕಿರಣ.

 

 

೨೫).ಕನಕದಾಸರ ಕಾವ್ಯಗಳ ಪುನರ್ಮೌಲ್ಯೀಕರಣ:
ಸ್ಥಳ : ರಾಣಿಚೆನ್ನಮ್ಮ ವಿಶ್ವವಿದ್ಯಾನಿಲಯ, ಬೆಳಗಾವಿ ದಿನಾಂಕ:೧೭ ಮತ್ತು ೧೮.೧೧.೨೦೧೫

ಸಮಾಜದೊಂದಿಗೆ ಸದಾ ಸಂವಾದ ನಡೆಸುವ ಕನಕದಾಸರ ವಿವಿಧ ಮುಖಗಳನ್ನು ಮತ್ತು ಅವರ ಕೊಡುಗೆಗಳನ್ನು ವಿವೇಚಿಸಿದ ಸಂಕಿರಣ.

 

 

೨೬).ಕನಕದಾಸರ ಅಭಿವ್ಯಕ್ತಿ :
ಮಾಧ್ಯಮ ಸ್ಪಂದನ ಸ್ಥಳ : ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಭಾರತೀಯ ವಿದ್ಯಾಭವನ, ಬೆಂಗಳೂರು ದಿನಾಂಕ:೨೨.೦೩.೨೦೧೬

ಕನಕದಾಸರು ತಳವರ್ಗದಲ್ಲಿ ಹುಟ್ಟಿ ಅನುಭವಿಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರ್ಘಷಗಳು. ಈ ಬಗೆಯ ಚಿಂತನೆಗಳನ್ನು ವರ್ತಮಾನದ ಮಾಧ್ಯಮಗಳ ಅಭಿವ್ಯಕ್ತಿಯೊಂದಿಗೆ ಸಮೀಕ್ಷಿಸಿ, ಸಮನ್ವಯಗೊಳಿಸಿ ಚರ್ಚಿಸಿದ ಸಂಕಿರಣ.

 

 

೨೭).ಕನ್ನಡ-ಮಲೆಯಾಳಂ ಸಾಹಿತ್ಯದಲ್ಲಿ ಭಕ್ತಿಯ ನೆಲೆಗಳು ಮತ್ತು ಕನಕದಾಸರು
ಸ್ಥಳ : ಮುನ್ಸಿಪಲ್ ಕಾನ್ಫರೆನ್ಸ್ ಹಾಲ್, ಪಿಲಿಕುಂಜೆ, ಕಾಸರಗೋಡು ದಿನಾಂಕ:೧೬.೦೭.೨೦೧೬

ಮಲಯಾಳಂ ಭಕ್ತಿ ಕವಿಗಳ ಪ್ರಮುಖ ಕೃತಿಗಳ ಕುರಿತು ಹಾಗೂ ಕನಕದಾಸರ ಕಾವ್ಯದ ಪ್ರಧಾನ ಗುಣಲಕ್ಷಣಗಳ ತೌಲನಿಕ ಅಧ್ಯಯನ ಈ ಸಂಕಿರಣ ಆಶಯ.

 

 

೨೮).ಕನಕ ಕೀರ್ತನೆಗಳು : ಸಂಗೀತ ವೈವಿಧ್ಯ (ಸೋದಾಹರಣ ಸಂಕಿರಣ) ಸ್ಥಳ : ಗಾನಭಾರತಿ ಸಭಾಂಗಣ ವೀಣೆ ಶೇಷಣ್ಣ ಭವನ, ಮೈಸೂರು. ದಿನಾಂಕ:೨೩ ಮತ್ತು ೨೪.೦೭.೨೦೧೬

ಕನಕ ಕೀರ್ತನೆಗಳನ್ನು ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜಾನಪದೀಯ ಸಂಗೀತ ಹಾಗೂ ಸುಗಮ ಸಂಗೀತವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿಷಯ ಮಂಡನೆ ಮಾಡುವುದು ಈ ಸಂಕಿರಣದ ಆಶಯ.

 

 

೨೯).ಭಾರತೀಯ ಭಕ್ತಿಪರಂಪರೆ ಮತ್ತು ಕನಕದಾಸರು – ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ
ಸ್ಥಳ : ದೆಹಲಿ ಕರ್ನಾಟಕ ಸಂಘದ ಸಭಾಂಗಣ, ದೆಹಲಿ ದಿನಾಂಕ:೨೮.೦೮.೨೦೧೪

ಕನಕದಾಸರ ಸಮಕಾಲೀನರಾಗಿದ್ದ ಭಾರತೀಯ ಭಕ್ತಿ ಪಂಥದ ಹಲವು ಜ್ಞಾನವರೇಣ್ಯ ಸಂತ-ಸೂಫಿಗಳ ಜೀವನ ಮೌಲ್ಯ-ತತ್ವಾದರ್ಶ, ಸಾಮಾಜಿಕ ಕೊಡುಗೆಗಳನ್ನು ಕನಕದಾಸರ ಜೀವನ ದರ್ಶನದ ಜೊತೆ ತೌಲನಿಕ ಅಧ್ಯಯನ ಮಾಡುವುದು ಸಂಕಿರಣದ ಉದ್ದೆಶ.

 

 

೩೦).ಸಾಂಸ್ಕೃತಿಕ ರಾಯಭಾರಿಗಳಾಗಿ ಕರ್ನಾಟಕದ ದಾರ್ಶನಿಕರು : ಬಸವಣ್ಣ, ಕನಕದಾಸರು
ಸ್ಥಳ : ಸರ್ಕಾರಿ ಆರ್.ಸಿ.ಕಾಲೇಜಿನ ಆವರಣ, ರೇಸ್ಕೋರ್ಸ್ ರಸ್ತೆ, ಬೆಂಗಳೂರು ದಿನಾಂಕ:೭.೧೦.೨೦೧೬

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಸವಣ್ಣ ಮತ್ತು ಕನಕದಾಸರ ಕೊಡುಗೆ ಅಗತ್ಯ. ಈ ದಾರ್ಶನಿಕರ ಜೀವನ ದರ್ಶನ ಮತ್ತು ಕಾವ್ಯ ದರ್ಶನ ವಿವೇಚಿಸಿದ ಸಂಕಿರಣ.

 

 

೩೧).ಕನಕದಾಸರ ಕೃತಿಗಳಲ್ಲಿ ಐತಿಹಾಸಿಕ ಅಂಶಗಳು
ಸ್ಥಳ : ಕೆಳದಿ ವಸ್ತು ಸಂಗ್ರಾಹಾಲಯ ಸಭಾಂಗಣ, ಕೆಳದಿ, ಸಾಗರ ತಾಲೂಕು, ಶಿವಮೊಗ್ಗ ದಿನಾಂಕ:೧೫.೧೨.೨೦೧೬

ಕನಕದಾಸರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಇಂದಿನ ಸಾಮಾಜಿಕ ಸನ್ನಿವೇಶಕ್ಕೆ ಹೇಗೆ? ಪ್ರಸ್ತುತ ಎನ್ನುವ ಚರ್ಚೆಯ ಈ ಸಂಕಿರಣದ ಆಶಯ.

 

 

೩೨).ಕನಕದಾಸರ ಕಾವ್ಯಗಳಲ್ಲಿ ಮಹಿಳಾ ಸಂವೇದನೆ
ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ದಿನಾಂಕ:೪.೦೨.೨೦೧೭

ಕನಕದಾಸರ ಸಾಹಿತ್ಯದಲ್ಲಿ ಧಾರ್ಮಿಕ ಮತ್ತು ಭಕ್ತಿಯ ಸ್ವರೂಪ, ಪೌರಾಣಿಕ ಪ್ರಜ್ಞೆ, ಐತಿಹಾಸಿಕ ಅಂಶಗಳು, ಸಾಮಾಜಿಕ ಅಭಿವ್ಯಕ್ತಿ ಪ್ರತಿ ಬಿಂಬಿತವಾದಂತೆ ಹೆಣ್ಣಿನ ಪರಿಕಲ್ಪನೆಯ ಹಿನ್ನೆಲೆಯಲ್ಲಿ ವಿವೇಚಿಸಿದ ಸಂಕಿರಣ.

 

 

೩೩). ಕನಕ ಮತ್ತು ಕುವೆಂಪು : ಸಾಂಸ್ಕೃತಿಕ ಅನುಸಂಧಾನ
ಸ್ಥಳ : ರಾಷ್ಟçಕವಿ ಕುವೆಂಪು ಪ್ರತಿಷ್ಠಾನ (ರಿ), ಕುಪ್ಪಳ್ಳಿ, ಶಿವಮೊಗ್ಗ ದಿನಾಂಕ:೧೧ ಮತ್ತು ೧೨.೦೨.೨೦೧೭

ಕನಕದಾಸರು ಮತ್ತು ಕುವೆಂಪು ಅವರ ಅಧ್ಯಾತ್ಮ ಚಿಂತನೆ, ತಳಸಮುದಾಯದ ಅನನ್ಯತೆ, ಸಾಮಾಜಿಕ ಪ್ರಸ್ತುತತೆ ಕುರಿತ ವಿಚಾರ ಸಂಕಿರಣ.

 

 

೩೪).ಕನಕದಾಸರ ಮುಂಡಿಗೆಗಳು
ಸ್ಥಳ : ಸರ್.ಎಂ.ವಿಶ್ವೆÃಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾಲಯ, ತುಮಕೂರು ದಿನಾಂಕ:೨೨.೦೨.೨೦೧೭

ಅಪರೂಪದ ರೂಪಕ ಜಗತ್ತು, ಬೆಡಗಿನ ರಚನೆಗಳು, ಶಬ್ದಾರ್ಥಗಳ ಸಂಬಂಧವನ್ನು ನಿರಂತರ ಚಲನಶೀಲವಾಗಿಸುವ ಕನಕದಾಸರ ಮುಂಡಿಗೆಗಳಲ್ಲಿ ಅಧ್ಯಾತ್ಮದ ಅನುಸಂಧಾನವನ್ನು ವಿಭಿನ್ನ ನೆಲೆಗಳಲ್ಲಿ ಕಂಡುಕೊಳ್ಳುವ ಉದ್ದೇಶ ಈ ವಿಚಾರ ಸಂಕಿರಣದ್ದು.

 

 

೩೫).ಬುದ್ಧ-ಕನಕ : ತಾತ್ವಿಕ ಅನುಸಂಧಾನ
ಸ್ಥಳ : ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, ಬೆಂಗಳೂರು ದಿನಾಂಕ:೧೦.೦೩.೨೦೧೭

ಕನಕ ಮತ್ತು ಬುದ್ಧನ ಅಧ್ಯಾತ್ಮಿಕ ಚಿಂತನೆ, ತಳಸಮುದಾಯದ ಅನನ್ಯತೆ, ಸಾಮಾಜಿಕ ಪ್ರಸ್ತುತತೆ ಕುರಿತ ವಿಚಾರ ಸಂಕಿರಣ ಇದಾಗಿದೆ.

 

 

೩೬).ಕನಕದಾಸ : ಮಹಿಳೆ ಮತ್ತು ಪ್ರಸ್ತುತ ಸಂದರ್ಭ
ಸ್ಥಳ : ಗಾಂಧಿ ಭವನ, ಮಂಡ್ಯ ದಿನಾಂಕ:೧೮.೦೩.೨೦೧೭

ಕನಕ ಸಾಹಿತ್ಯ ಓದಿನ ಪರಿಕಲ್ಪನೆ, ಸ್ತ್ರೀ ವ್ಯಕ್ತಿತ್ವದ ಪ್ರತಿಪಾದನೆ ಕುರಿತ ವಿಚಾರ ಸಂಕಿರಣ.

 

 

೩೭). ಕನ್ನಡ ತತ್ವಪದಗಳ ಅನನ್ಯತೆ
ಸ್ಥಳ : ಸರ್ಕಾರಿ ಕಲಾ ಕಾಲೇಜು,ಸ್ನಾತಕೋತ್ತರ ವಿಭಾಗದ ಸಭಾಂಗಣ, ಚಿತ್ರದುರ್ಗ ದಿನಾಂಕ:೨೭.೦೩.೨೦೧೭

ಜ್ಞಾನಿಗಳ, ಅನುಭಾವಿಗಳ ಬದುಕಿನ ಅವಿಭಾಜ್ಯ ಅಂಗವೇ ಆಗಿ ಬೆಳೆದುಬಂದಿರುವ ತತ್ವಪದಗಳ ಮಹತ್ವವನ್ನು ಯುವಜನತೆಗೆ ತಲುಪಿಸುವ ಉದ್ದೆಶವೇ ಸಂಕಿರಣದ ಆಶಯ.

 

 

೩೮).ದಾಸ ಸಾಹಿತ್ಯದಲ್ಲಿ ಕನಕದಾಸ ಪರಂಪರೆ (ತಳಸಮುದಾಯದ ಹರಿದಾಸರು)
ಸ್ಥಳ : ಉದಯಭಾನು ಕಲಾಸಂಗ, ಕೆಂಪೇಗೌಡ ನಗರ, ಬೆಂಗಳೂರು ದಿನಾಂಕ:೧.೦೪.೨೦೧೭

ಹರಿದಾಸ ಪರಂಪರಯೆಲ್ಲಿ ತಳಸಮುದಾಯದ ಹರಿದಾಸರ ಸಾಂಸ್ಕೃತಿಕ ಕೊಡುಗೆಯನ್ನು ಕುರಿತ ವಿಚಾರ ಸಂಕಿರಣ.

 

 

೩೯). ಕನಕ – ಬೇಂದ್ರೆ ಕಾವ್ಯಾನುಸಂಧಾನ
ಸ್ಥಳ : ಬೇಂದ್ರೆ ಭವನ, ಸಾಧನಕೇರಿ, ಧಾರವಾಡ ದಿನಾಂಕ:೬ ಮತ್ತು ೭.೦೪.೨೦೧೭

ನವೋದಯ ಕಾಲಘಟ್ಟದ ಪ್ರಮುಖ ಕವಿ ಬೇಂದ್ರೆ. ಅಧ್ಯಾತ್ಮಿಕವಾಗಿ, ಜಾನಪದೀಯವಾಗಿ, ಭಾವಾಗೀತಾತ್ಮಕವಾಗಿ ಕನಕ ಹಾಗೂ ಬೇಂದ್ರೆಯವರ ತೌಲನಿಕ ಅನುಸಂಧಾನ ಇದರ ಆಶಯ.

 

 

೪೦).ಕನಕದಾಸರ ಜಾನಪದ ದರ್ಶನ
ಸ್ಥಳ : ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಸಭಾಂಗಣ, ಮೈಸೂರು-ಬೆಂಗಳೂರು ರಸ್ತೆ, ರಾಮನಗರ ದಿನಾಂಕ:೨೮.೦೪.೨೦೧೭

ಕನಕದಾಸರನ್ನು ನೆಲೆಯಾಗಿಟ್ಟುಕೊಂಡು ಅವರ ಜಾನಪದೀಯ ಅಭಿವ್ಯಕ್ತಿ, ಸಮಾಜ ಸುಧಾರಕ ದೇವರು ಮತ್ತು ಜೀವನ ದರ್ಶನದ ಬಗ್ಗೆ ವಿವೇಚಿಸಿದ್ದು ಈ ಸಂಕಿರಣದ ಉದ್ದೆಶ.

 

 

೪೧).ತಳಸಮುದಾಯಗಳ ಸಾಂಸ್ಕೃತಿಕ ಸಂಚಲನ
ಸ್ಥಳ : ನೂತನ ರವೀಂದ್ರ ಮಂಟಪ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ ದಿನಾಂಕ:೧೧ ಮತ್ತು ೧೨.೦೮.೨೦೧೭

ವಚನಕಾರರು, ತತ್ವಪದಕಾರರು, ನಾಥ ಪರಂಪರೆ, ಕನಕ ಪರಂಪರೆ, ಸೂಫಿ ಪರಂಪರೆ, ಕರಾವಳಿ ಪರಂಪರೆ ಆಧುನಿಕ ಪರಂಪರೆಯಲ್ಲಿ ಬರುವ ತಳಸಮುದಾಯಗಳ ಸಾಂಸ್ಕೃತಿಕ ಸಂಚಲನ ಕುರಿತ ಸಂಕಿರಣ.

 

 

೪೨).ಕನಕದಾಸರ ಕೀರ್ತನೆಗಳಲ್ಲಿ ಜೀವನ ದರ್ಶನ
ಸ್ಥಳ : ಬಿ.ವಿ.ರತ್ನಯ್ಯ ಶೆಟ್ಟಿ ಸಭಾಂಗಣ, ವಿ.ಇ.ಟಿ. ಪ್ರಥಮ ದರ್ಜೆ ಕಾಲೇಜು, ಜೆ.ಪಿ.ನಗರ, ಬೆಂಗಳೂರು ದಿನಾಂಕ:೧೮.೦೮.೨೦೧೭

ಸಮಾಜ ದರ್ಶನ, ಅಧ್ಯಾತ್ಮ ದರ್ಶನ, ವೈಚಾರಿಕ ಪ್ರತಿಪಾದನೆ ಕುರಿತು ಕನಕರ ಕೀರ್ತನೆಗಳಲ್ಲಿನ ಜೀವನ ದರ್ಶನ ಕುರಿತ ವಿಚಾರ ಸಂಕಿರಣ.

 

 

೪೩).ಕನಕ-ಷರೀಫರ ತತ್ವ ಸಾಹಿತ್ಯ : ತೌಲನಿಕ ಓದು
ಸ್ಥಳ : ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಆವರಣ, ಕೆರಿಮತ್ತಿಹಳ್ಳಿ, ಹಾವೇರಿ. ದಿನಾಂಕ:೨೨.೦೮.೨೦೧೭

ಕನಕ ಷರೀಫರಲ್ಲಿ ತತ್ವ ಸಾಹಿತ್ಯದ ಗೀತ, ಲಯ ಮತ್ತು ಸಂಗೀತವನ್ನು ತೌಲನಿಕವಾಗಿ ಅಧ್ಯಯನ ಮಾಡುವ ಸಾಧ್ಯತೆಗಳ ಕುರಿತ ವಿಚಾರ ಸಂಕಿರಣ.

 

 

೪೪).ಕನಕ-ತಿರುವಳ್ಳುವರ್-ವೇಮನ : ತಾತ್ವಿಕ ವಿವೇಚನೆ
ಸ್ಥಳ : ಭಾರತೀಯ ಭಾಷಾ ಅಧ್ಯಯನ ಕೇಂದ್ರ, ಕನ್ನಡ ವಿಭಾಗ, ಮಧುರೈ ದಿನಾಂಕ:೩೧.೦೮.೨೦೧೭

ತಿರುವಳ್ಳುವರ್ ಹಾಗೂ ವೇಮನರ ಜೀವನ ಮೌಲ್ಯ ತತ್ವಾದರ್ಶನ, ಸಾಮಾಜಿಕ ಕೊಡುಗೆಗಳನ್ನು ಕನಕದಾಸರ ಜೀವನ ದರ್ಶನದ ಜೊತೆ ತೌಲನಿಕ ಅಧ್ಯಯನ ಈ ಸಂಕಿರಣದ ಉದ್ದೆಶ.

 

 

೪೫). ಕನಕದಾಸರ ಕಾವ್ಯಗಳಲ್ಲಿ ಪರಿಸರ
ಸ್ಥಳ : ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪದವಿ ಕಾಲೇಜು, ಹತ್ವಾರ್ ಸಭಾಂಗಣ, ಚಾಮರಾಜಪೇಟೆ, ಬೆಂಗಳೂರು ದಿನಾಂಕ:೧೫.೦೯.೨೦೧೭

ಕನಕದಾಸರ ಕೃತಿಗಳಲ್ಲಿ ಪರಿಸರದ ದರ್ಶನ ಹೇಗೆ ಚಿತ್ರವಾಗಿದೆ ಎಂಬುದು ವಿಚಾರ ಸಂಕಿರಣದ ಉದ್ದೆಶ.

 

 

೪೬). ತತ್ವಾನುಸಂಧಾನ ಹಾಗೂ ಚಿತ್ರದುರ್ಗ ಜಿಲ್ಲಾ ತತ್ವಪದ ಸಂಪುಟಗಳ ಅವಲೋಕನ
ಸ್ಥಳ : ಕ್ರೀಡಾ ಭವನ, ಚಿತ್ರದುರ್ಗ ದಿನಾಂಕ:೪.೧೧.೨೦೧೭

ಅನುಭಾವಿಗಳ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ತತ್ವಪದ ಸಾಹಿತ್ಯ, ತತ್ಪಪದ ಸಂಪುಟಗಳಲ್ಲಿ ಹೊರಬಂದಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ತತ್ವಪದಗಳ ಅವಲೋಕನ ಕುರಿತ ವಿಚಾರ ಸಂಕಿರಣ.

 

 

೪೭).ಕನಕದಾಸರು : ವರ್ತಮಾನದ ಸಂವೇದನೆ
ಸ್ಥಳ : ವೇದಾವತಿ ಸರ್ಕಾರಿ ವಿಜ್ಞಾನ ಪ್ರಥಮ ದರ್ಜೆ ಕಾಲೇಜು, ಹುಳಿಯಾರ್ ರಸ್ತೆ, ಹಿರಿಯೂರು, ಚಿತ್ರದುರ್ಗ ದಿನಾಂಕ:೧೫.೦೨.೨೦೧೮

ಕನಕದಾಸರ ಸಾಮಾಜಿಕ ಸಂವೇದನೆ ನೆಲೆಗಳು, ಬಹುತ್ವ ಸಮುದಾಯದ ಪ್ರಜ್ಞೆ, ವರ್ತಮಾನದಲ್ಲಿ ಹೇಗೆ ಪ್ರಸ್ತುತ ಎನ್ನುವುದನ್ನು ಪ್ರತಿಪಾದಿಸುವ ವಿಚಾರ ಸಂಕಿರಣ.

 

 

೪೮).ಕನಕದಾಸರ ಪ್ರಸ್ತುತತೆ : ಯುವಸ್ಪಂದನ
ಸ್ಥಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ, ಮೈಸೂರು ದಿನಾಂಕ:೧೬.೦೩.೨೦೧೮

ಕನಕದಾಸರ ನಾಲ್ಕು ಕಾವ್ಯ ಕೃತಿಗಳ ಕುರಿತ ಯುವ ಸಮುದಾಯವು ಕನಕರ ಚಿಂತನೆಯನ್ನು ಭಿನ್ನ ಭಿನ್ನ ಆಯಾಮಗಳಲ್ಲಿ ಅವಲೋಕಿಸುವುದಕ್ಕೆ ಅವಕಾಶ ಕಲ್ಪಿಸಿದ ಸಂಕಿರಣದ.

 

 

೪೯).ಸಂತಕವಿ ಕನಕದಾಸರು ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳು
ಸ್ಥಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡು, ಮೈಸೂರು ದಿನಾಂಕ:೪.೧೦.೨೦೧೮

ದಾರ್ಶನಿಕ ಕವಿ ಕನಕದಾಸರ ಸಾಹಿತ್ಯ ಮತ್ತು ಸಾಮಾಜಿಕ ಸಂವೇದನೆಯನ್ನು ಕುರಿತಂತೆ ಭಾರತೀಯ ನೆಲೆಯಲ್ಲಿ ತೌಲನಿಕವಾಗಿ ವಿಶ್ಲೇಷಿಸುವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಜಾತಿ, ವರ್ಗ ವರ್ಣಗಳ ವಿರುದ್ಧ ಹೋರಾಡಿದ ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಕವಿ ಕನಕದಾಸರ ನೆಲೆಯಲ್ಲಿ ತೌಲನಿಕವಾಗಿ ಅವಲೋಕಿಸಿದ ಸಂಕಿರಣ.

 

 

೫೦). ಮಧ್ಯಯುಗೀನ ಭಕ್ತಿ – ವಿವಿಧ ಆಯಾಮಗಳ ಅನುಸಂಧಾನ (ರಾಷ್ಟ್ರೀಯ ವಿಚಾರ ಸಂಕಿರಣ)
ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ದಿನಾಂಕ:೨೫ ಮತ್ತು ೨೬.೧೦.೨೦೧೮

ಭಾರತೀಯ ಸಂದರ್ಭದಲ್ಲಿ ವಿವಿಧ ಸ್ತರಗಳ ವಸಾಹತುವಾಗಿ ಮುಂದುವರಿಯುತ್ತಲೇ ಬಂದಿರುವ ವ್ಯಕ್ತಿ ಮತ್ತು ಸಮಷ್ಟಿಯ ಸಂಕಟಗಳನ್ನು ಮಧ್ಯಯುಗೀನ ಭಕ್ತಿ ಚಳುವಳಿಗಳು ಭಿನ್ನ ಭಿನ್ನ ನೆಲೆಯಲ್ಲಿ ಅರ್ಥೈಸುವ ಅಂತೆಯೇ ಬಿಡುಗಡೆಯ ದಾರಿಗಳನ್ನು ಒದಗಿಸುವ ಸಮಾಜಮುಖಿ ನಿಲುವುಗಳನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಭಾರತದ ಅನೇಕ ಅನುಭಾವಿ ಪಂಥಗಳೊಡನೆ ಕೊಳು-ಪಡೆ
ಪಡೆಯುವ ಅನುಸಂಧಾನವನ್ನು ಗಮನಿಸಬಹುದಾಗಿದೆ. ಇದರ ಪರಿಣಾಮವಾಗಿಯೂ ಸಹ ಈ ಪಂಥಗಳ ಪ್ರಭಾವಕ್ಕೆ ಒಳಗಾಗಿ ಸಂಗೀತ, ಚಿತ್ರಕಲೆ, ಸಾಹಿತ್ಯ, ದರ್ಶನ, ಮುಂತಾದ ಕ್ಷೆತ್ರಗಳು ಈ ಪಂಥಗಳೊಡನೆ ಸಂವಾದ ನಡೆಸುತ್ತಲೇ ಬೆಳೆದಿವೆ.ಈ ಹಿನ್ನೆಲೆಯಲ್ಲಿ ಭಕ್ತಿ ಚಳುವಳಿಗಳು ವ್ಯಕ್ತಿ ಮತ್ತು ಸಮಷ್ಟಿಯ ನೆಲೆಯಲ್ಲಿ ಪ್ರಭಾವಿಸಿರುವ ರೀತಿ-ರಿವಾಜು, ಅನುಸಂಧಾನಗಳನ್ನು ಪರ್ಯಾಯಲೋಚಿಸಿದ್ದು ಈ ಎರಡು ದಿನಗಳ ಸಂಕಿರಣ.

 

 

೫೧). ಕನಕದಾಸರು ಸಾಂಸ್ಕೃತಿಕ ಅನುಸಂಧಾನ (ರಾಷ್ಟಿಯ ವಿಚಾರ ಸಂಕಿರಣ)
ಸ್ಥಳ : ಮೈಸೂರು ಅಸೋಸಿಯೇಷನ್ ಸಭಾಗೃಹ, ಮಾತುಂಗ, ಮುಂಬಯಿ ದಿನಾಂಕ:೧೫.೧೨.೨೦೧೮

ಕನಕದಾಸರ ಚಿಂತನೆ, ಸಾಹಿತ್ಯ ಮತ್ತು ಜೀವನ ದರ್ಶನದ ಕುರಿತಾಗಿ ಈವರೆಗೆ ನಡೆದಿರುವ ಅಧ್ಯಯನ ಮತ್ತು ಸಂಶೋಧನೆಗಳ ನೆಲೆಗಳನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಅದರ ಹೊಸದಿಕ್ಕುಗಳನ್ನು ಗುರುತಿಸುವ ಪ್ರಯತ್ನದ ಅಂಗವಾಗಿ ವಿಚಾರ ಸಂಕಿರಣ, ಸಂವಾದಗೋಷ್ಠಿಯ ಜೊತೆಗೆ ಕನಕದಾಸರ ಸಮಕಾಲೀನರಾಗಿದ್ದ ಭಾರತೀಯ ಭಕ್ತಿಪಂಥದ ಹಲವು ಸಂತರ ಜೀವನ ಮೌಲ್ಯ-ತತ್ವಾದರ್ಶ, ಸಾಮಾಜಿಕ ಕೊಡುಗೆಗಳನ್ನು ಕನಕದಾಸರ ಜೀವನ ದರ್ಶನದ ಜೊತೆ ತೌಲನಿಕ ಅಧ್ಯಯನ ಮಾಡುವುದು ಈ ವಿಚಾರ ಸಂಕಿರಣದ ಆಶಯ.

 

 

೫೨). ಕನಕದಾಸರು ಮತ್ತು ಅಪ್ಪಚ್ಚಕವಿ : ತೌಲನಿಕ ಅಧ್ಯಯನ
ಸ್ಥಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆ, ಕೊಡಗು ದಿನಾಂಕ:೪.೦೧.೨೦೧೯

ಕೊಡಗಿನ ಅಪ್ಪಚ್ಚ ಕವಿಯು ಕೊಡಗು ಭಾಷೆ ಮತ್ತು ಸಂಸ್ಕೃತಿಯ ಅಪ್ಪಚ್ಚ ಕವಿ ಎಂದೇ ಪ್ರಖ್ಯಾತರಾಗಿದ್ದು, ಅವರು ತನ್ನನ್ನು ಹರದಾಸ ಎಂದು ಕರೆದುಕೊಂಡಿದ್ದಾರೆ. ಕೊಡಗಿನ ಕಾಳಿದಾಸ ಎಂದು ಇವರನ್ನು ಕರೆಯುವುದುಂಟು. ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಇವರ ಪ್ರಕಟಣೆಗಳು ಪ್ರಖ್ಯಾತವಾಗಿವೆ. ೧೬ನೆಯ ಶತಮಾನದ ಕನಕದಾಸರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾಳಜಿ, ಹಾಗೆಯೇ ಅಪ್ಪಚ್ಚ ಕವಿಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾಳಜಿಯ ಕುರಿತಂತೆ ಏರ್ಪಡಿಸಿದ್ದ ತೌಲನಿಕ ವಿಚಾರ ಸಂಕಿರಣ.

 

ಇತ್ತೀಚಿನ ನವೀಕರಣ​ : 17-08-2022 04:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080